ಕೊಟ್ಟಾಯಂ: ಖ್ಯಾತ ನಟ ವಿನೋದ್ ಥಾಮಸ್ ಕೇರಳದ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಶನಿವಾರ(ನ.18) ತಿಳಿಸಿದ್ದಾರೆ. ವಿನೋದ್ ಥಾಮಸ್‌ಗೆ 45 ವರ್ಷ ವಯಸ್ಸಾಗಿತ್ತು.
ಹೋಟೆಲ್ ನ ಮಾಲೀಕರೋರ್ವರು ತಮ್ಮ ಹೋಟೆಲ್ ಮುಂಭಾಗದಲ್ಲಿ ಸುಮಾರು ದಿನಗಳಿಂದ ನಿಲ್ಲಿಸಿದ್ದ ಕಾರಿನ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಕಾರನ್ನು ಪರೀಕ್ಷಿಸಿದಾಗ ಕಾರಿನ ಒಳಗೆ ವ್ಯಕ್ತಿಯೊಬ್ಬರ ದೇಹ ಕಾಣಿಸಿಕೊಂಡಿದೆ. ಅದು ಖ್ಯಾತ ನಟ ವಿನೋದ್ ಥಾಮಸ್ ಅವರ ದೇಹವಾಗಿತ್ತು. ನಂತರ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ವೈದ್ಯರು ಅವರನ್ನು ಪರೀಕ್ಷಿಸಿದಾಗ ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿನೋದ್ ಥಾಮಸ್ ಸಾವಿನ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ವಿವಿಧ ವರದಿಗಳ ಪ್ರಕಾರ, ಕಾರಿನ ಎಸಿಯಿಂದ ವಿಷಕಾರಿ ಅನಿಲವನ್ನು ಉಸಿರಾಡಿದ್ದರಿಂದ ಸಾವಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಈ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಮಸ್ ಅವರು ‘ಅಯ್ಯಪ್ಪನುಮ್ ಕೊಶ್ಯುಮ್’, ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಇತರ ಚಲನಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
Discussion about this post