ಬೆಂಗಳೂರು: ಜೆ.ಪಿ.ನಗರದ ಮೂರನೇ ಹಂತದಲ್ಲಿ ಒಂದೇ ಕುಟುಂಬದ ಮೂವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಸುಕನ್ಯಾ (48), ಮಕ್ಕಳಾದ ನಿಖಿತ್ (28) ಹಾಗೂ ನಿಶ್ಚಿತ್ (28) ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ಆರ್ಥಿಕ ಸಂಕಷ್ಟ ತಾಳಲಾರದೇ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಉಡುಪಿಯ ಅಂಬಲಪಾಡಿ ಮೂಲದ ಈ ಕುಟುಂಬ ಜೆ.ಪಿ.ನಗರದ ಮೂರನೇ ಹಂತದಲ್ಲಿ ವಾಸವಿತ್ತು. ಮನೆಯಲ್ಲಿ ಸುಕನ್ಯಾ, ಪತಿ ಜಯಾನಂದ, ಅವಳಿ ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ವಾಸವಿದ್ದರು.
ಸ್ವಂತ ಉದ್ಯಮ ನಡೆಸುತ್ತಿದ್ದ ಜಯಾನಂದ್ ಅವರಿಗೆ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ನಷ್ಟವಾಗಿತ್ತು ಎನ್ನಲಾಗಿದೆ. ಆ ನಂತರ ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರಿಂದ, ಸುಕನ್ಯಾ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದರು. ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಮನೆಯಿಂದಲೇ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದ. ನಾಲ್ಕೈದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದುದರಿಂದ ಜಯಾನಂದ್ ಸಹ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು.
ಇಂದು ಬೆಳಗ್ಗೆ ಪತಿಗೆ ಹಾಲು, ದಿನಪತ್ರಿಕೆ ಕೊಟ್ಟು ರೂಂ ಬಾಗಿಲು ಲಾಕ್ ಮಾಡಿದ್ದ ಸುಕನ್ಯಾ ಹಾಲ್‌ನಲ್ಲಿ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೂರು ಶವಗಳ ಮೈ-ಕೈಗೆ ಎಲೆಕ್ಟ್ರಿಕ್ ಕೇಬಲ್ ಸುತ್ತಿರುವುದು ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ
ನಿಕಿತ್ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಮನೆಗೆ ಸಾಲಗಾರರು ಬರುತ್ತಿದ್ದರು. ಹದಿನೈದು ವರ್ಷಗಳಿಂದ ಒಂದೇ ಮನೆಯಲ್ಲಿ ಕುಟುಂಬ ಬಾಡಿಗೆಗೆ ಇತ್ತು. ಕಳೆದ ಕೆಲ ತಿಂಗಳಿನಿಂದ ಬಾಡಿಗೆ ಕಟ್ಟಲು ಕುಟುಂಬ ಒದ್ದಾಡುತ್ತಿತ್ತು. ಮಂಗಳವಾರ ಸಾಲಗಾರರು ಮನೆ ಬಳಿ ಬಂದು ಸಾಲ ಪಾವತಿಸುವಂತೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಯ ಸಂದರ್ಭದಲ್ಲಿ ಜಯಾನಂದ ಅವರು ಮನೆಯಲ್ಲಿಯೇ ಇದ್ದುದಾಗಿ ಹೇಳಿದ್ದಾರೆ. ಆದ್ದರಿಂದ ಸಾವಿಗೆ ನಿಖರ ಕಾರಣದ ಕುರಿತು ತನಿಖೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಇದು ಆತ್ಮಹತ್ಯೆಯೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ. ಜೆ.ಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿರುವುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post