ಮಂಗಳೂರು, ಆ 20 : ಧರ್ಮಸ್ಥಳದಲ್ಲಿ ಹನ್ನೊಂದು ವರ್ಷದ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಕೃತ್ಯಕ್ಕೆ ಸಂಬಂಧಿಸಿ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯದ ಹಲೆವೆಡೆ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ಮಂಗಳೂರಿನಲ್ಲೂ ಕಾಣಿಸಿಕೊಂಡಿವೆ. ಸೌಜನ್ಯಾ ಹೋರಾಟ ಸಮಿತಿ ಮಂಗಳೂರು ಇದರ ವತಿಯಿಂದ ರವಿವಾರ ನಗರದ ಕದ್ರಿ ಬಯಲಯ ರಂಗ ಮಂದಿರದ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೌಜನ್ಯಾ ಪರ ಹೋರಾಟದ ಧ್ವನಿ ಮೊಳಗಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಗೂ ಮೊದಲು ಕದ್ರಿ ದೇವಸ್ಥಾನದಿಂದ ಮೈದಾನದವರಿಗೆ ಪಾದಯಾತ್ರೆ ನಡೆಯಿತು. ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಶಿಕಲಾ ಶೆಟ್ಟಿ ಸ್ವಾಗತಿಸಿ ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.
ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಎಲ್ಲಾ ಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ಸೌಜನ್ಯಾ ಪ್ರಕರಣದ ಮರು ತನಿಖೆಗೆ ಸರಕಾರದ ಮೇಲೆ ಒತ್ತಡ ಹೇರಬೇಕು. ಸಮರ್ಥ ತಂಡದಿಂದ ತನಿಖೆ ಮಾಡಿಸಬೇಕು. ತಮ್ಮ ಮನೆ ಬಾಗಿಲಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವಂತಹ ವಾತಾವರಣವನ್ನು ಯಾವ ಕಾರಣಕ್ಕೂ ರಾಜಕಾರಣಿಗಳು ಸೃಷ್ಟಿಸಬಾರದು ಎಂದರು.
ನ್ಯಾಯ ಕೇಳುವವರ ಬಾಯಿ ಮುಚ್ಚಿಸಲು ಇನ್ನೆಂದೂ ಸಾಧ್ಯವಿಲ್ಲ. 11 ವರ್ಷಗಳ ಕಾಲ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಾಂತಿಯಾಗಲಿದೆ. ಸೆ.3ರಂದು ಬೆಳ್ತಂಗಡಿಯಲ್ಲಿ ಜರುಗಿಸುವ ಬೃಹತ್ ಪ್ರತಿಭಟನೆಯ ಮೂಲಕ ಸರಕಾರ, ರಾಜಕಾರಣಿಗಳು, ಪೊಲೀಸ್ ಇಲಾಖೆಯನ್ನು ಕಣ್ತೆರೆಸುವ ಪ್ರಯತ್ನ ನಡೆಯಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಎಚ್ಚರಿಸಿದರು.
‘ಧರ್ಮದ ಜಾಗದಲ್ಲಿ ಅಧರ್ಮ ತಾಂಡವವಾಡುತ್ತಿದೆ. ಈಗ ಜನರೇ ಕಾಳಿ, ಕೃಷ್ಣನ ಸ್ವರೂಪ ತಾಳಬೇಕಾಗುತ್ತದೆ. ದುಡ್ಡಿನ ಬಲದಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದು ಈಗ ನಡೆಯುವುದಿಲ್ಲ. ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಕೋಟ್ಯಂತರ ಜನರ ಕಿಚ್ಚು ಇದರಲ್ಲಿ ಅಡಗಿದೆ. 11 ವರ್ಷ ಶಾಂತಿಯುತ ಹೋರಾಟ ನಡೆಸಿದೆವು. ಮುಂದಿನ ಹೋರಾಟ ಇದೇ ರೀತಿ ಇರುವುದಿಲ್ಲ. ಪೇಟಧಾರಿಗಳನ್ನೂ ಬಿಡುವುದಿಲ್ಲ. ಅಗತ್ಯ ಬಿದ್ದರೆ ನಿಮ್ಮ ಮನೆಗೆ ನುಗ್ಗಲೂ ಹಿಂಜರಿಯುವುದಿಲ್ಲ’ ಎಂದರು.
ಸೌಜನ್ಯಾಳ ತಾಯಿ ಕುಸುಮಾವತಿ ಮಾತನಾಡಿ ಕಳೆದ 11 ವರ್ಷದಿಂದ ನ್ಯಾಯಾಕ್ಕಾಗಿ ಊರಿಡೀ ಸುತ್ತುತ್ತಿದ್ದೇವೆ. ಈಗ ನಮ್ಮ ಹೋರಾಟಕ್ಕೆ ಜನರ ಬೆಂಬಲ ಕಂಡಾಗ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದರು. ತಾಯಿ ಕುಸುಮಾವತಿ ಗೌಡ ವೇದಿಕೆಯಲ್ಲೇ ಅಡ್ಡಬಿದ್ದು ನಮಸ್ಕರಿಸಿ ‘ಮಗಳಿಗೆ ನ್ಯಾಯಕೊಡಿಸಿ’ ಎಂದು ಕಣ್ಣೀರಿಟ್ಟು ಅಂಗಲಾಚಿದರು.
ಸೌಜನ್ಯಾ ಹೋರಾಟ ಸಮಿತಿಯ ಮಂಗಳೂರು ಘಟಕದ ಸಂಚಾಲಕಿ ಪ್ರಸನ್ನಾ ರವಿ, ‘ಸೌಜನ್ಯಾಳಿಗೆ ನ್ಯಾಯ ಕೊಡಿಸಲು ಪ್ರತಿಭಟನೆ ನಡೆಸುವುದಾಗಿ ಬಿಜೆಪಿಯವರೂ ತಿಳಿಸಿದ್ದಾರೆ. ಸಂತೋಷವೇ. ಆದರೆ ಆಕೆಯ ಮೇಲೆ ಅತ್ಯಾಚಾರ ನಡೆದಾಗ ನಿಮ್ಮದೇ ಪಕ್ಷದ ಸರ್ಕಾರವಿತ್ತು. ನ್ಯಾಯ ಕೊಡಿಸಲು ಆಗ ನೀವೇನೂ ಮಾಡಿಲ್ಲ ಎಂಬುದನ್ನೂ ನಾವು ಮರೆತಿಲ್ಲ. ನಿಮ್ಮ ನಾಟಕ ನೋಡಿದ್ದೇವೆ. ಸೌಜನ್ಯಾ ಬಗ್ಗೆ ನಿಜವಾದ ಕಾಳಜಿ ಇದ್ದರೆ ರಾಜ್ಯದ ಸಂಸದರೆಲ್ಲ ಸೇರಿ ರಾಷ್ಟ್ರಪತಿ, ಪ್ರಧಾನಿ, ಕೇಂದ್ರದ ಗೃಹ ಸಚಿವರಲ್ಲಿ ಈ ಬಗ್ಗೆ ಒತ್ತಾಯಿಸಲಿ. ನ್ಯಾಯ ಸಿಗದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ’ ಎಂದರು.
ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಸೌಜನ್ಯಾ ಹೋರಾಟ ಸಮಿತಿಯ ಮಂಗಳೂರು ಘಟಕದ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸೌಜನ್ಯಾ ಪ್ರಕರಣದ ತನಿಖೆ ಮುಗಿದ ಅಧ್ಯಾಯ’ ಎಂಬ ಗೃಹ ಸಚಿವ ಜಿ. ಪರಮೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಿಮ್ಮ ಕುಟುಂಬದ ಹೆಣ್ಣುಮಕ್ಕಳಿಗೆ ಇಂಥ ಸ್ಥಿತಿ ಎದುರಾಗುತ್ತಿದ್ದರೆ ಇಂತಹದ್ದೇ ಹೇಳಿಕೆ ನೀಡುವಿರಾ’ ಎಂದು ಪ್ರಶ್ನಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post