ಮುಡಿಪು, ಸೆ.20: ರಸ್ತೆ ಬದಿಯ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬ ಧಿಡೀರ್ ಆಗಿ ರಸ್ತೆ ದಾಟಿ ಓಡುತ್ತಿದ್ದ ವೇಳೆ ಕಾರಿನಡಿಗೆ ಬಿದ್ದರೂ ಪವಾಡ ಸದೃಶ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಮುಡಿಪು ಬಳಿಯ ಇರಾದಲ್ಲಿ ನಡೆದಿದೆ.
ಶಿವಾನಂದ್ ಎಂಬವರ ಪುತ್ರ ಮನೋಜ್ (12) ಗಾಯಾಳು ಬಾಲಕ. ಆಟವಾಡಲೆಂದು ಮನೆಯಿಂದ ಹೊರ ಓಡಿಬಂದ ಕಾರು ಚಾಲಕ ದಿಢೀರ್ ಆಗಿ ಬಾಲಕ ಅಡ್ಡ ಬಂದಿದ್ದರಿಂದ ಗಲಿಬಿಲಿಯಾಗಿ ತಪ್ಪಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಿ ಕಾರು ಡಿಕ್ಕಿಯಾಗಿ ಬಾಲಕ ಅಡಿಗೆ ಬಿದ್ದಿದ್ದು ರಸ್ತೆ ಬದಿಯ ಪೊದೆಯ ಮೂಲಕ ಆತನ ಮೇಲಿಂದಲೇ ಕಾರು ಹರಿದಿದೆ.
ಅದೃಷ್ಟ ಇದ್ದರೆ ಸಾವನ್ನೂ ಗೆಲ್ಲಬಹುದು ಎನ್ನುವಂತೆ, ಬಾಲಕ ಪೊದೆಯ ಎಡೆಗೆ ಬಿದ್ದ ಕಾರಣ ಪವಾಡ ಸದೃಶ ಅಪಾಯದಿಂದ ಪಾರಾಗಿದ್ದಾನೆ. ಘಟನೆಯಿಂದ ಬಾಲಕ ಮನೋಜ್ ಎಡ ಕಾಲಿಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.