ಮಂಗಳೂರು: ಮಂಗಳೂರು ದಸರಾ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಮೆರವಣಿಗೆ ಹಿನ್ನೆಲೆಯಲ್ಲಿ ಅಕ್ಟೋಬರ್ 21ರ ಸಂಜೆ 4ರಿಂದ ಅಕ್ಟೋಬರ್ 22ರ ಬೆಳಗ್ಗೆ 6ರವರೆಗೆ ನಗರದ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಮೆರವಣಿಗೆ ಕುದ್ರೋಳಿ ದೇವಸ್ಥಾನದ ದ್ವಾರದಿಂದ ಮಣ್ಣಗುಡ್ಡೆ ಜಂಕ್ಷನ್, ನಾರಾಯಣಗುರು ವೃತ್ತ (ಲೇಡಿಹಿಲ್), ಲಾಲ್ಭಾಗ್, ಬಳ್ಳಾಲ್ಭಾಗ್, ಪಿ.ವಿ.ಎಸ್. ಜಂಕ್ಷನ್, ನವಭಾರತ ವೃತ್ತ, ಸಿಟಿ ಸೆಂಟರ್, ಹಂಪನಕಟ್ಟೆ, ಕೆಬಿ ಕಟ್ಟೆ, ಕಾರ್ಸ್ಟ್ರೀಟ್ ಮತ್ತು ನ್ಯೂಚಿತ್ರಾ ಜಂಕ್ಷನ್ ಮೂಲಕ ಸಾಗಿ ದೇವಸ್ಥಾನಕ್ಕೆ ಮರಳಲಿದೆ. ಅಕ್ಟೋಬರ್ 21ರ ಮಧ್ಯಾಹ್ನ 2 ಗಂಟೆಯಿಂದಲೇ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚಿಸಿದ್ದಾರೆ.
ಪಾರ್ಕಿಂಗ್ ವ್ಯವಸ್ಥೆ : ಮೆರವಣಿಗೆ ವೀಕ್ಷಿಸಲು ಬರುವ ಸಾರ್ವಜನಿಕರು ಕರಾವಳಿ ಮೈದಾನ, ಅಳಕೆ ಮಾರ್ಕೆಟ್, ಉರ್ವ ಮಾರ್ಕೆಟ್ ಮೈದಾನ, ಉರ್ವ ಕೆನರಾ ಸ್ಕೂಲ್, ಕೆನರಾ ಡೊಂಗರಕೇರಿ ಸ್ಕೂಲ್, ಪೊಂಪೈ ಚರ್ಚ್, ದುರ್ಗಾಮಹಲ್ ಹೋಟೆಲ್, ಕುದ್ರೋಳಿ ನಾರಾಯಣ ಕಾಲೇಜು, ಬಿ.ಇ.ಎಂ. ಸ್ಕೂಲ್, ಸರಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆ (ಕಾರ್ಸ್ಟ್ರೀಟ್) ಹಾಗೂ ಹೋಟೆಲ್ ವಿಮಲೇಶ್ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.
ಪರ್ಯಾಯ ಮಾರ್ಗಗಳ ವಿವರ: ಕೊಟ್ಟಾರ ಚೌಕಿ ಜಂಕ್ಷನ್ನಿಂದ ಲೇಡಿಹಿಲ್ ಮೂಲಕ ನಗರಕ್ಕೆ ಬರುವ ವಾಹನಗಳು ಕುಂಟಿಕಾನ–ಕೆಪಿಟಿ–ನಂತೂರು ಮಾರ್ಗವಾಗಿ ಸಂಚರಿಸಬೇಕು. ಬಂಟ್ಸ್ ಹಾಸ್ಟೆಲ್ನಿಂದ ಪಿ.ವಿ.ಎಸ್. ಮೂಲಕ ಎಂ.ಜಿ. ರಸ್ತೆಗೆ ತೆರಳುವ ವಾಹನಗಳು ಭಾರತ್ ಬೀಡಿ–ಬಟ್ಟಗುಡ್ಡ–ಕೆಪಿಟಿ ಅಥವಾ ಭಾರತ್ ಬೀಡಿ–ಮಲ್ಲಿಕಟ್ಟೆ ಮಾರ್ಗ ಬಳಸಬೇಕು. ಕೆಎಸ್ಆರ್ಟಿಸಿ ಜಂಕ್ಷನ್ನಿಂದ ಲಾಲ್ಭಾಗ್ ಕಡೆಗೆ ತೆರಳುವ ವಾಹನಗಳು ಕಾಪಿಕಾಡ್–ಕುಂಟಿಕಾನ ಅಥವಾ ಬಿಜೈ–ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸಬೇಕು. ಕೆಎಸ್ಆರ್ಟಿಸಿ ಬಸ್ಗಳಿಗೂ ಇದೇ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಹಂಪನಕಟ್ಟೆಯಿಂದ ಕೆಎಸ್ಆರ್ ರಸ್ತೆಯ ಮೂಲಕ ನವಭಾರತ ವೃತ್ತದ ಮಾರ್ಗವಾಗಿ ಪಿ.ವಿ.ಎಸ್. ಕಡೆಗೆ ತೆರಳುವ ವಾಹನಗಳು ಎಲ್ಎಚ್ಎಚ್–ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸಬೇಕು.
ನ್ಯೂಚಿತ್ರಾ ಜಂಕ್ಷನ್ನಿಂದ ನವಭಾರತ ವೃತ್ತದ ಕಡೆಗೆ ಹಾಗೂ ಲೇಡಿಹಿಲ್ನ ನಾರಾಯಣಗುರು ವೃತ್ತದಿಂದ ಮಣ್ಣಗುಡ್ಡೆ–ದುರ್ಗಾಮಹಲ್–ಕುದ್ರೋಳಿ ದೇವಸ್ಥಾನದ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು.
ಮೆರವಣಿಗೆ ಸಾಗುವ ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡದಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post