ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಓಮೈಕ್ರಾನ್ ವೈರಾಣು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ವಿಶೇಷ ನಿಗಾವಹಿಸಲಾಗಿದೆ. ಎಲ್ಲೂ ಪ್ರಯಾಣ ಮಾಡದಿರುವ ಸ್ಥಳೀಯ ವಿದ್ಯಾರ್ಥಿಗಳಿಗೆ ಸೋಂಕು ಹೇಗೆ ತಗುಲಿದೆ ಎನ್ನುವ ಬಗ್ಗೆ ಕಾರಣ ಪತ್ತೆ ಮಾಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಪಾಸಿಟಿವ್ ಬಂದಿದ್ದ ಒಬ್ಬರಲ್ಲಿ ಓಮೈಕ್ರಾನ್ ಪತ್ತೆಯಾಗಿದೆ. ಸೋಂಕು ತಗುಲಿರುವ ಉಳಿದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲಿರುವ ಎಲ್ಲದ ಗಂಟಲು ದ್ರವ ಮಾದರಿ ಸಂಗ್ರಹಿಸಿ ತಪಾಸಣೆ ಮಾಡಲಾಗಿದೆ. ಎಲ್ಲರ ಪ್ರಯಾಣದ ವಿವರ ಪಡೆಯಲು ಸೂಚಿಸಲಾಗಿದೆ. ಓಮೈಕ್ರಾನ್ ಪತ್ತೆಯಾಗಿರುವ ಎಲ್ಲ ಐವರು ವಿದ್ಯಾರ್ಥಿಗಳಾಗಿದ್ದು, ಹೊರ ರಾಜ್ಯ ಪ್ರಯಾಣ ಮಾಡಿದವರಲ್ಲ. ಒಬ್ಬರು ಮಾತ್ರ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹೊರ ರಾಜ್ಯದ ವಿದ್ಯಾರ್ಥಿನಿ. ಎಂದರು.
ದಕ್ಷಿಣ ಕನ್ನಡ ಮತ್ತು ಕೇರಳ ರಾಜ್ಯದ ಕಾಸರಗೋಡು ನಡುವೆ ಅನ್ಯೋನ್ಯ ಸಂಬಂಧ ಇದೆ. ಕಾಸರಗೋಡು, ಕಣ್ಣೂರು ಭಾಗದವರು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಾಗಿ ಮಂಗಳೂರನ್ನು ಅವಲಂಬಿಸಿದ್ದಾರೆ. ಕೇರಳದಲ್ಲಿ ಪಾಸಿಟಿವಿಟಿ ದರ ಶೇ 8–9ರಷ್ಟಿದೆ. ದಕ್ಷಿಣ ಜಿಲ್ಲೆ ಮತ್ತು ಕೇರಳದ ನಡುವೆ 40 ಕಿ.ಮೀ ಉದ್ದದ ಗಡಿಭಾಗ ಇದ್ದು, ಮಂಗಳೂರು 10 ಕಿ.ಮೀ ಅಂತರದಲ್ಲಿದೆ. ಕೇರಳದಿಂದ ಜಿಲ್ಲೆ ಪ್ರವೇಶಕ್ಕೆ 70ಕ್ಕೂ ಹೆಚ್ಚು ಕಡೆಗಳಲ್ಲಿ ಮಾರ್ಗ ಇದೆ. ಎಲ್ಲ ಮಾರ್ಗಗಳ ಮೇಲೆ ನಿಗಾ ಇಡಲಾಗಿದೆ. ಗಡಿ ಪ್ರವೇಶಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆದವರು ಸಹ ಪ್ರಯಾಣದ ವಿವರ ನೀಡಬೇಕು ಎಂದು ಹೇಳಿದರು.