ಮಂಗಳೂರು: ನಗರದ ಸೆಂಟ್ರಲ್ ಮಾರ್ಕೆಟ್ ಸಮೀಪದ ವಾಣಿಜ್ಯ ಕಟ್ಟಡವೊಂದರಲ್ಲಿ ಭಾನುವಾರ ಬೆಳಗ್ಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಬೆಳಗ್ಗೆ ಸುಮಾರು 3.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಪಾಂಡೇಶ್ವರ ಮತ್ತು ಕದ್ರಿ ಅಗ್ನಿಶಾಮಕ ಠಾಣೆಯ ಒಟ್ಟು 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಳಗ್ಗೆ 7.45ರವರೆಗೂ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ.
ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಒಂದು ಇಲೆಕ್ಟ್ರಾನಿಕ್ ಸಾಮಗ್ರಿಗಳ ಮಳಿಗೆ ಮತ್ತು ಬ್ಯಾಗ್, ಶೂಗಳ ಮಳಿಗೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಇದು ನಾಲ್ಕು ಅಂತಸ್ತುಗಳ ಕಟ್ಟಡವಾಗಿದ್ದು, ಇತರ ಮಳಿಗೆಗಳಿಗೂ ಬೆಂಕಿ ತಗಲಿ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು. ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಟ್ಟಿದ್ದಾರೆ. ಪಾಂಡೇಶ್ವರ ಅಗ್ನಿಶಾಮಕ ಠಾಣೆಯ 3 ಮತ್ತು ಕದ್ರಿ ಠಾಣೆಯ 2 ವಾಹನಗಳನ್ನು ಬಳಸಿಕೊಳ್ಳಲಾಗಿದೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್, ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿ ಸುನೀಲ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post