ಮಂಗಳೂರು, ಡಿ.20: ಕಾನೂನು ವಿದ್ಯಾರ್ಥಿನಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ವಕೀಲ ಕೆ.ಎಸ್.ಎನ್ ರಾಜೇಶ್ ಮಂಗಳೂರಿನ ಕೋರ್ಟಿಗೆ ಶರಣಾಗಿದ್ದಾರೆ.
ಮೂರನೇ ಜೆಎಂಎಫ್ ಕೋರ್ಟಿನಲ್ಲಿ ಮಧ್ಯಾಹ್ನ ಮೂರು ಗಂಟೆಗೆ ದಿಢೀರ್ ಹಾಜರಾಗಿದ್ದಾರೆ. ವಕೀಲನ ಹಾಜರಾತಿ ತಿಳಿಯುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು ದೌಡಾಯಿಸಿ ಬಂದಿದ್ದಾರೆ.
ಅ.18 ರಂದು ಎಫ್ಐಆರ್ ದಾಖಲಾದ ಬೆನ್ನಲ್ಲೇ ವಕೀಲ ಕೆಎಸ್ಎನ್ ರಾಜೇಶ್ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. ಈ ನಡುವೆ, ಮಂಗಳೂರಿನ ಕೋರ್ಟಿನಲ್ಲಿ ಹಾಕಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತ ಆಗಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜೇಶ್ ಪರ ವಕೀಲರು ಅಲ್ಲಿಯೂ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇತ್ತೀಚೆಗೆ ಹೈಕೋರ್ಟ್ ಕೂಡ ಜಾಮೀನು ನೀಡಲು ನಿರಾಕರಿಸಿತ್ತು. ಆನಂತರ ವಕೀಲನ ಬಂಧನ ಆಗಲಿದೆ ಎನ್ನುವ ವದಂತಿ ಹರಡಿತ್ತು. ಪೊಲೀಸರು ಹುಡುಕಾಟ ಆರಂಭಿಸಿದ್ದರೂ, ಪತ್ತೆ ಆಗಿರಲಿಲ್ಲ. ಇದೀಗ ಮಂಗಳೂರಿನ ಕೋರ್ಟಿಗೆ ಹಾಜರಾಗಿದ್ದು ಜೈಲಿಗೆ ಕಳಿಸುತ್ತಾ ಪೊಲೀಸ್ ಕಸ್ಟಡಿ ನೀಡುತ್ತಾ ಅನ್ನುವ ಕುತೂಹಲ ಉಂಟಾಗಿದೆ.