ಮಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.
ದರೋಡೆ ಪ್ರಕರಣದ ಮುಖ್ಯ ಕಿಂಗ್‌ಪಿನ್ ತಿರುನೆಲ್ವೇಲಿಯ ಮುರುಗಂಡಿ ಥೆವರ್ (36), ಮುಂಬೈ ಯೊಸುವ ರಾಜೇಂದ್ರನ್ (35), ಮುಂಬೈನ ಕನ್ನನ್ ಮಣಿ (36) ಬಂಧಿತ ಆರೋಪಿಗಳು. ಮುಂಬೈ ಮೂಲದ ಗ್ಯಾಂಗ್ ಹಾಗೂ ತಮಿಳುನಾಡು ಮೂಲದ ದರೋಡೆಕೋರರಿಂದ ಈ ಕೃತ್ಯ ನಡೆದಿತ್ತು. ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ದರೋಡೆ ನಡೆಸಲೆಂದೇ ಇವರೆಲ್ಲರೂ ಮಂಗಳೂರಿಗೆ ಬಂದಿದ್ದರು. ದರೋಡೆ ಬಳಿಕ ಕೇರಳದಿಂದ ತಮಿಳುನಾಡಿಗೆ ತಂಡ ಪರಾರಿಯಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಪ್ರಕರಣದ ಜಾಡು ಹಿಡಿದ ಮಂಗಳೂರು ಪೊಲೀಸರು, ಮುಂಬೈಯಿಂದ ಬಂದ ಮಾಹಿತಿ ಕಲೆ ಹಾಕಿ ತಮಿಳುನಾಡಿನ ತಿರುವನಲ್ವೇಲಿಯಲ್ಲಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಫಿಯೆಟ್ ಕಾರ್, ತಲ್ವಾರ್, ಪಿಸ್ತೂಲ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದರು. ಕೃತ್ಯ ಎಸಗಲು ಮಹಾರಾಷ್ಟ್ರ ಮೂಲದ ಫಿಯೆಟ್ ಕಾರನ್ನು ಬಳಸಲಾಗಿತ್ತು. ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ತನಿಖೆ ಮುಂದುವರೆದಿದೆ ಎಂದು ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಕಾರಿನ ಜಾಡು ಹಿಡಿದು : ದರೋಡೆಕೋರರು ಮುಂಬಯಿಯಿಂ ದಲೇ ಹಳೆಯ ಫಿಯೆಟ್ ಕಾರು ತಂದಿದ್ದರು. ದರೋಡೆಯ ಸಂದರ್ಭ ಅದಕ್ಕೆ ಕರ್ನಾಟಕದ ನಂಬರ್ ಪ್ಲೇಟ್ ಹಾಕಿದ್ದರಷ್ಟೇ. ದರೋಡೆ ನಡೆಸಿದ ಕಾರು ನಕಲಿ ನಂಬರ್ ಪ್ಲೇಟ್‌ನಲ್ಲಿ ತಲಪಾಡಿ ಟೋಲ್ ದಾಟಿತ್ತು. ಆ ನಂಬರ್ ಪ್ಲೇಟ್ ಬೆಂಗಳೂರಿನ ಕಾರೊಂದರದ್ದಾಗಿತ್ತು. ಆದರೆ ಕಾರಿನ ಮಾಡೆಲ್ ನ್ನು ಆಧರಿಸಿ ಪೊಲೀಸರು ಅಸಲಿ ಮಾಲಕನನ್ನು ಶುಕ್ರವಾರವೇ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಅವನಿಂದ ಈ ಕಾರು ಬೇರೊಬ್ಬರಿಗೆ ಮಾರಾಟವಾಗಿತ್ತು. ಬೇರೊಬ್ಬರಿಂದ ಈ ಕಾರನ್ನು ದರೋಡೆ ಕೋರ ತಂಡದ ಕಿಂಗ್ ಪಿನ್ ಮುರುಗಂಡಿ ಥೇವರ್ ಖರೀದಿಸಿದ್ದ. ಇವೆಲ್ಲವೂ ಧಾರಾವಿಯ ದಾರಿಯನ್ನು ತೆರೆದವು. ಬಳಿಕ ಉಳಿದ ವಿವರಗಳೂ ಲಭ್ಯವಾದವು. ಪೊಲೀಸರು ಬಲೆ ಬೀಸಿದರು.
ಬ್ಯಾಂಕ್ ದರೋಡೆಗೆ ಮುಂಬಯಿಯಲ್ಲಿಯೇ ಸಂಚು!: ಪೊಲೀಸರಿಗೆ ಸಿಕ್ಕ ಮೂರನೇ ಸುಳಿವು ದರೋಡೆಕೋರರು ಆರಲ್ಲ, ಸುಮಾರು ಹತ್ತು ಮಂದಿ ಎಂದು ಹೇಳುತ್ತಿದೆ. ವಿಶ್ವಾಸಾರ್ಹ ಮೂಲಗಳ ಪ್ರಕಾರ, ಈ ದರೋಡೆ ಯೋಜನೆಯನ್ನು ಸುಮಾರು ಹತ್ತು ಮಂದಿ ರೂಪಿಸಿದ್ದರು. ಇವರಲ್ಲಿ ಆರು ಮಂದಿ ಕಾರ್ಯಾಚರಣೆಗೆ ಇಳಿದಿದ್ದರೆ, ಉಳಿದವರು ಮುಂಬಯಿಯಲ್ಲೇ ದರೋಡೆಯ ಅನಂತರದ ಯೋಜನೆ ರೂಪಿಸುತ್ತಿದ್ದರು. ಈ ಪೈಕಿ ಕೆ.ಸಿ.ರೋಡ್‌ನಲ್ಲಿನ ಬ್ಯಾಂಕ್‌ನ ಬಗ್ಗೆ ಸಮಗ್ರ ಮಾಹಿತಿ ಹೊಂದಿದ್ದವರನ್ನೂ ಒಳಗೊಂಡ ತಂಡ ಮುಂಬಯಿಯಲ್ಲಿ ಕುಳಿತು ಇಡೀ ದರೋಡೆಗೆ ಸಂಚು ರೂಪಿಸಿತ್ತು. ಕಾರ್ಯಾಚರಣೆಯ ತಂಡ, ವಿಧಾನ ಹಾಗೂ ದಿನ, ಹೊತ್ತು ಎಲ್ಲವನ್ನೂ ಅಂತಿಮಗೊಳಿಸಲಾಗಿತ್ತು. ಆದರೆ ಈ ತಂಡದಲ್ಲಿದ್ದ ಒಬ್ಬಿಬ್ಬರನ್ನು ಕಾರ್ಯಾಚರಣೆಗೆ ಮುನ್ನ ಈ ಯೋಜನೆಯಿಂದ ಹೊರಗಿಡಲಾಗಿತ್ತು. ಬಳಿಕ ದರೋಡೆಯ ಮೌಲ್ಯ, ಪಾಲು ಹಂಚಿಕೆ ಎಲ್ಲವೂ ಆಗಿತ್ತು. ಹಾಗಾಗಿ ಈ ಹೊರಗಿದ್ದವರಿಗೆ ಈ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಯಾವುದೋ ದೊಡ್ಡ ದರೋಡೆ ಎಂಬುದು ಖಚಿತವಾಗಿತ್ತು. ಯಾವಾಗ ಇಂಥ ಯೋಜನೆಯಿಂದ ಹೊರಗಿಟ್ಟರೋ, ಆ ಇಬ್ಬರಲ್ಲಿ ಒಬ್ಬ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ಕ್ಲೂé ಕಳುಹಿಸಿದ್ದ. ಈ ಧಾರಾವಿ ತಂಡದ ಬಗ್ಗೆ ಸಿಕ್ಕ ಮಾಹಿತಿಗೂ, ಕಾರಿನ ಮೂಲದ ಜಾಡು ಧಾರಾವಿ ತಲುಪಿದ್ದಕ್ಕೂ ಸರಿ ಹೊಂದಿತ್ತು.
ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯ ಇಲ್ಲ. ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post