ಉಳ್ಳಾಲ: ರಾಜ್ಯದಲ್ಲಿ ಸದ್ದು ಮಾಡಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ನಡೆದಿದೆ. ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್ ನಗರ ನಿವಾಸಿ ಕಣ್ಣನ್ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಜ.17 ರಂದು ಉಳ್ಳಾಲದ ಕೆ.ಸಿ. ರೋಡ್ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಪಿಸ್ತೂಲ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು ದರೋಡೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿರುವ ಸಮಯದಲ್ಲಿ ಈ ಘಟನೆ ನಡೆದಿತ್ತು.
ಆರೋಪಿಗಳಲ್ಲಿ ಮೂವರನ್ನು ನಿನ್ನೆ(ಸೋಮವಾರ) ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. ತಮಿಳುನಾಡಿನಲ್ಲಿ ಮುರುಗುಂಡಿ ಥೇವರ್, ಮುಂಬೈನ ಯೋಸುವ ರಾಜೇಂದ್ರನ್ ಮತ್ತು ಕಣ್ಣನ್ ಮಣಿಯನ್ನು ಬಂಧಿಸಲಾಗಿತ್ತು. ಇದರಲ್ಲಿ ಮುಂಬೈನ ಚೆಂಬೂರಿನ ತಿಲಕ್ ನಗರದ ನಿವಾಸಿ ಮಣಿ ಅವರ ಪುತ್ರ ಕಣ್ಣನ್ ಮಣಿ (36) ಎಂಬ ಆರೋಪಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ, ಕಣ್ಣನ್ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆ ವೇಳೆ ಪೊಲೀಸರು ಆತನ ಕಾಲಿಗೆ ಫೈರಿಂಗ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಕಮಿಷನರ್ ಹೇಳಿದ್ದೇನು?: ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪನ್ ಅಗರ್ವಾಲ್, “ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ, ಇಂದು ಸಂಜೆ 4:20ರ ಸುಮಾರಿಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸಿ. ರಸ್ತೆಯ ಅಲಂಕಾರು ಗುಡ್ಡೆ ಬಳಿ ಸ್ಥಳ ಪರಿಶೀಲನೆ ನಡೆಸಲಾಯಿತು. ಆರೋಪಿಗಳು ಮತ್ತು ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಹೆಚ್.ಎನ್. ಮತ್ತು ತನಿಖಾ ತಂಡದ ಸದಸ್ಯರ ಸಮ್ಮುಖದಲ್ಲಿ ತಪಾಸಣೆ ನಡೆಸಲಾಯಿತು” ಎಂದರು.
“ತಪಾಸಣೆಯ ಸಮಯದಲ್ಲಿ, ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು. ಸ್ಥಳದಲ್ಲಿ ದೊರೆತ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿ ಅಂಜನಪ್ಪ ಮತ್ತು ನಿತಿನ್ ಮೇಲೆ ದಾಳಿ ಮಾಡಿದನು. ಆರೋಪಿಗಳು ತನಿಖಾ ಅಧಿಕಾರಿ ಉಳ್ಳಾಲ ಪೊಲೀಸ್ ನಿರೀಕ್ಷಕರನ್ನೂ ತಳ್ಳಿ, ಅವರಿಗೆ ಇರಿದು ಹಾಕಲು ಪ್ರಯತ್ನಿಸಿದರು. ಜೊತೆಗಿದ್ದ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದ ಎಚ್ಚರಿಕೆಯ ಹೊರತಾಗಿಯೂ, ಆರೋಪಿ ತನ್ನ ಹಲ್ಲೆ ಮುಂದುವರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು” ಎಂದು ಹೇಳಿದರು.
“ಈ ಕಾರಣದಿಂದ ಸಿಸಿಬಿ ಪೊಲೀಸ್ ನಿರೀಕ್ಷಕರು ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಅವನನ್ನು ನಿಗ್ರಹಿಸಿ ವಶಕ್ಕೆ ಪಡೆದರು. ಘಟನೆಯಲ್ಲಿ ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಅಂಜನಪ್ಪ ಮತ್ತು ಉಳ್ಳಾಲ ಪೊಲೀಸ್ ನಿರೀಕ್ಷಕ ನಿತಿನ್ ಅವರಿಗೆ ಗಾಯಗಳಾಗಿವೆ. ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಗಳನ್ನು ತಕ್ಷಣ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post