ಮಂಗಳೂರು: ನಗರದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಹಾಗೂ ಸರ್ಕಾರಿ ಪುರುಷರ ಐಟಿಐಗಳನ್ನು ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿದ್ದು, ಇಲ್ಲಿ ಆರಂಭಿಸಲಾದ ‘ಉದ್ಯೋಗ’ ಯೋಜನೆಯನ್ನು ಸೋಮವಾರ ಶಾಸಕ ಡಿ.ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಕೈಗಾರಿಕಾ ವಲಯದಲ್ಲಿ ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ತರಬೇತಿ ಒದಗಿಸಲು ಈ ಎರಡು ಐಟಿಐಗಳನ್ನು ಸಜ್ಜುಗೊಳಿಸಲಾಗಿದೆ. ಇದಕ್ಕಾಗಿಯೇ ಕಾರ್ಯಾಗಾರಗಳನ್ನು ನಿರ್ಮಿಸಲಾಗಿದ್ದು, ತರಬೇತಿ ನೀಡಲು ಅಗತ್ಯವಿರುವ ಸುಸಜ್ಜಿತ ಉಪಕರಣಗಳನ್ನು ಟಾಟಾ ಟೆಕ್ನಾಲಜೀಸ್ ಸಂಸ್ಥೆಯು ಒದಗಿಸಿದೆ. ದೀರ್ಘಾವಧಿ ಕೋರ್ಸ್‌ಗಳ ಮೂಲಕ ರಾಜ್ಯದಾದ್ಯಂತ 1.5 ಲಕ್ಷ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಗುರಿಯೊಂದಿಗೆ ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜೀಸ್ ಮತ್ತು ಇತರ ಸಂಸ್ಥೆಗಳ ಜೊತೆ ಸೇರಿ ‘ಉದ್ಯೋಗ’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಗೆ ತಗಲುವ ಒಟ್ಟು ಮೊತ್ತದಲ್ಲಿ ಶೇ 12ರಷ್ಟನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ. ಉಳಿದ ವೆಚ್ಚವನ್ನು ಟಾಟಾ ಟೆಕ್ನಾಲಜೀಸ್ ಹಾಗೂ ಇತರ ಸಂಸ್ಥೆಗಳು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಭರಿಸುತ್ತಿವೆ.
ವೇದವ್ಯಾಸ ಕಾಮತ್, ‘ರಾಜ್ಯದಾದ್ಯಂತ 150 ಐಟಿಐಗಳಲ್ಲಿ ಹಾಗೂ ನಾನು ಪ್ರತಿನಿಧಿಸುತ್ತಿರುವ ಕ್ಷೇತ್ರದ ಎರಡು ಐಟಿಐಗಳು ಸೇರಿ, ಜಿಲ್ಲೆಯ ಐದು ಐಟಿಐಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ವಿದ್ಯುನ್ಮಾನ ವಾಹನಗಳು ಹಾಗೂ ಲೇಸರ್ ಕಟ್ಟಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ತರಬೇತಿಯನ್ನೂ ಈಗ ಐಟಿಐಗಳಲ್ಲಿ ಪಡೆಯಲು ಸಾಧ್ಯ. ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಗಿಟ್ಟಿಸಲು ಈ ಕಾರ್ಯಕ್ರಮ ನೆರವಾಗಲಿದೆ’ ಎಂದು ತಿಳಿಸಿದರು.
ಐಟಿಐ ಪ್ರಾಂಶುಪಾಲ ಎ.ಬಾಲಕೃಷ್ಣ, ‘ಉದ್ಯೋಗ ಕಾರ್ಯಕ್ರಮದಡಿ ಟೆಕ್ನಾಲಜಿ ಲ್ಯಾಬ್‌ಗಳನ್ನು ಆರಂಭಿಸಲಾಗಿದೆ. ಎರಡೂ ಐಟಿಐಗಳಿಗೂ ತಲಾ 60 ಕಂಪ್ಯೂಟರ್‌ಗಳನ್ನು ಪೂರೈಸಲಾಗಿದೆ. ವಿ–ಸ್ಯಾಟ್ ಉಪಗ್ರಹ ಆಧಾರಿತ ತರಗತಿಗಳ ಮೂಲಕ ರಾಜ್ಯದಾದ್ಯಂತ ತಜ್ಞರು ಏಕಕಾಲದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ’ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಉನ್ನತೀಕರಣಗೊಂಡಿರುವ 150 ಐಟಿಐಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ರೂಪದಲ್ಲಿ ಉದ್ಘಾಟಿಸಿದರು. ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ವಿಟ್ಲ ಐಟಿಐಗಳಲ್ಲೂ ಉದ್ಯೋಗ ಯೋಜನೆ ಅನುಷ್ಠಾನಗೊಳ್ಳುತ್ತಿದೆ.
ಪಾಲಿಕೆ ಸದಸ್ಯೆ ಶಕೀಲಾ ಕಾವ, ಸೀಡೆಕ್ ಜಂಟಿ ನಿರ್ದೇಶಕ ಅರವಿಂದ ಡಿ.ಬಾಳೇರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ವಿವೇಕಾನಂದ, ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಹೇಮಚಂದ್ರ, ಪುರುಷರ ಐಟಿಐನ ಐಎಂಸಿ ಜೀವನ್ ಸಲ್ಡಾನ ಹಾಗೂ ಮಹಿಳೆಯರ ಐಟಿಐನ ಐಎಂಸಿ ಪೀಟರ್ ನಿರ್ಮಲ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post