ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಮತ್ತು ಇತರ ಮೂವರು ಆರೋಪಿಗಳನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರು ಕೋರ್ಟ್ ಗುರುವಾರ ಆದೇಶಿಸಿದೆ. ಇತ್ತ ಈವರೆಗೂ ಐಷಾರಾಮಿ ಜೀವನ ನಡೆಸುತ್ತಿದ್ದ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಇನ್ಮುಂದೆ ಮುದ್ದೆ ಊಟವೇ ಗತಿಯಾಗಿದೆ. ಆರೋಪಿಗಳಿಗೆ ಸುಲಭದಲ್ಲಿ ಜಾಮೀನು ಸಿಗಲಾರದು ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ಕೂಡ ಪವಿತ್ರಾ ಜೊತೆಗೆ ಜೈಲು ಸೇರುವುದು ಖಚಿತವಾಗಿದೆ.
ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ಇಂದು ಮಧ್ಯಾಹ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಮತ್ತು ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಹಾಗೂ ಇತರೆ ಮೂವರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಪೊಲೀಸರ ಮನವಿ ಪುರಸ್ಕರಿಸಿದ ಕೋರ್ಟ್, ದರ್ಶನ್ ಹಾಗೂ ಇತರ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಇತರ 13 ಆರೋಪಿಗಳನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕೊಲೆ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ.
ರೇಣುಕಾಸ್ವಾಮಿ ಎಂಬ ವ್ಯಕ್ತಿಯು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಹತ್ಯೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಈಗಾಗಲೇ ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಅನೇಕ ಸ್ಥಳಗಳಿಗೆ ತೆರಳಿ ಮಹಜರು ಮಾಡಲಾಗಿದೆ. ಪವಿತ್ರಾ ಗೌಡ ಮನೆಯಲ್ಲೂ ಮಹಜರು ಮಾಡಲಾಗಿತ್ತು. ತನಿಖೆ ಇನ್ನೂ ಪ್ರಗತಿಯಲ್ಲಿದೆ.
Discover more from Coastal Times Kannada
Subscribe to get the latest posts sent to your email.








Discussion about this post