ಮಂಗಳೂರು: ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ರೈಲು ಹಳಿ ಮೇಲೆ ಶನಿವಾರ ಮುಂಜಾನೆ 4.23ಕ್ಕೆ ಬಂಡೆಗಳು ಉರುಳಿದ್ದರಿಂದ ಮೂರು ರೈಲುಗಳನ್ನು ನಿಲ್ದಾಣಗಳಲ್ಲಿ ಕೆಲ ಕಾಲ ನಿಲ್ಲಿಸಲಾಯಿತು.
ಬೆಂಗಳೂರು ಸೆಂಟ್ರಲ್ (ಕೆಎಸ್ಆರ್) – ಕಣ್ಣೂರು ಎಕ್ಸ್‌ಪ್ರೆಸ್ (ನಂ16511) ರೈಲನ್ನು ಕಡಗರವಳ್ಳಿ ನಿಲ್ದಾಣದಲ್ಲಿ, ಬೆಂಗಳೂರು- ಮುರ್ಡೇಶ್ಬರ ಎಕ್ಸ್‌ಪ್ರೆಸ್ (ನಂ 16585) ಮತ್ತು ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (07377) ರೈಲನ್ನು ಸಕಲೇಶಪುರ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿತ್ತು.
ಹಳಿಗೆ ಬಿದ್ದ ಬಂಡೆ ಮತ್ತು ಮಣ್ಣನ್ನು ತೆರವುಗೊಳಿಸಲಾಗಿದೆ. ರೈಲುಗಳು ಬೆಳಿಗ್ಗೆ 9 ಗಂಟೆ 10 ನಿಮಿಷದ ಬಳಿಕ ಈ ಹಳಿಯಲ್ಲಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದ್ದ ರೈಲುಗಳು ಪ್ರಯಾಣ ಮುಂದುವರಿಸಿವೆ. ನಿಲ್ದಾಣದಲ್ಲಿ ತಾಸು ಗಟ್ಟಲೆ ಕಾಯಬೇಕಾಗಿ ಬಂದಿದ್ದರಿಂದ ಪ್ರಯಾಣಿಕರಿಗೆ ಉಪಾಹಾರ, ಬಿಸ್ಕೆಟ್, ಚಹಾ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ನೈರುತ್ಯ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಲೋಕೋ ಪೈಲಟ್ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ: ಕಿಲೋ ಮೀಟರ್ 74 ಮತ್ತು 75ರ ಬಳಿ ಈ ಘಟನೆ ಸಂಭವಿಸಿದೆ. ಇದೇ ಮಾರ್ಗದಲ್ಲಿ ನೂರಾರು ಪ್ರಯಾಣಿಕರನ್ನು ಹೊತ್ತ ರೈಲೊಂದು ಸಂಚರಿಸುತ್ತಿತ್ತು. ಲೋಕೋ ಪೈಲಟ್ಗೆ ಹಳಿಗಳ ಮೇಲೆ ಬಿದ್ದಿದ್ದ ಬೃಹತ್ ಬಂಡೆಗಳು ಕಾಣಿಸಿದೆ. ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಇಲ್ಲವಾದಲ್ಲಿ ರೈಲಿನ ಇಂಜಿನ್ ಬಂಡೆಗೆ ಗುದ್ದಿ ಭಾರೀ ಅವಘಡ ಸಂಭವಿಸುವ ಅಪಾಯವಿತ್ತು.
ಬೆಂಗಳೂರು- ಕಣ್ಣೂರು ರೈಲು ಮತ್ತು ಬೆಂಗಳೂರು- ಮುರುಡೇಶ್ವರ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಅರೆಬೆಟ್ಟ ಮತ್ತು ಎಡಕುಮೇರಿ ಮಧ್ಯ ಭಾಗದಲ್ಲಿ ಗುಡ್ಡ ಕುಸಿತವಾಗಿದ್ದು ಪ್ರಯಾಣಿಕರು ನಡುವೆ ಸಿಕ್ಕಿಬೀಳುವಂತಾಗಿದೆ. ರೈಲ್ವೇ ಸಿಬ್ಬಂದಿಗಳು ಗುಡ್ಡ ತೆರವುಗೊಳಿಸುತ್ತಿದ್ದು ಮಧ್ಯಾಹ್ನ ವೇಳೆಗೆ ತೆರವಾಗುವ ಸಾಧ್ಯತೆಯಿದೆ.
Discover more from Coastal Times Kannada
Subscribe to get the latest posts sent to your email.
Discussion about this post