ಮಂಗಳೂರು: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ಮೂರನೇ ಹೆಚ್ಚುವರಿ ನ್ಯಾಯಾಲಯವು ಇವರಿಬ್ಬರೂ ನಿರ್ದೋಷಿ ಎಂದು ಆದೇಶ ಪ್ರಕಟಿಸಿದೆ. ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಬಿ. ಜಕಾತಿ ಈ ಆದೇಶ ಪ್ರಕಟಿಸಿದರು.
ಬೆಳ್ತಂಗಡಿ ತಾಲ್ಲೂಕು ಕುತ್ಲೂರಿನ ವಿಠಲ ಮಲೆಕುಡಿಯ ಅವರನ್ನು 2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ದಳವು ಬಂಧಿಸಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸುವುದರ ವಿರುದ್ದ ಹೋರಾಟ ನಡೆಸುತ್ತಿದ್ದ ವಿಠಲ ಮಲೆಕುಡಿಯ ಅವರ ಮನೆ ಮೇಲೆ ದಾಳಿ ನಡೆಸಿದ್ದಾಗ ಚುನಾವಣೆ ಬಹಿಷ್ಕಾರದ ಕರಪತ್ರ, ಭಗತ್ ಸಿಂಗ್ ಪುಸ್ತಕ, ನಕ್ಸಲ್ ಬರಹದ ಪತ್ರಿಕಾ ತುಣುಕುಗಳು ಪತ್ತೆಯಾಗಿದ್ದವು. ಹೀಗಾಗಿ ಅವರಿಗೆ ನಕ್ಸಲ್ ನಂಟಿದೆ ಎಂದು ಬಂಧಿಸಿ ನಕ್ಸಲ್ ನಿಗ್ರಹ ಪಡೆಯವರು ವೇಣೂರು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವಿಠಲ ಮಲೆಕುಡಿಯ ಅವರನ್ನು 6ನೇ ಆರೋಪಿಯನ್ನಾಗಿ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು 7ನೇ ಆರೋಪಿಯನ್ನಾಗಿ ಮಾಡಲಾಗಿತ್ತು.
ಬಂಧನ ಸಮಯದಲ್ಲಿ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ಜೈಲಿನಿಂದಲೇ ಪರೀಕ್ಷೆಗೆ ಬಂದಿದ್ದು, ಪರೀಕ್ಷಾ ಕೇಂದ್ರದಲ್ಲಿ ಅವರು ಕೈಕೋಳ ತೊಟ್ಟು ಪರೀಕ್ಷೆ ಬರೆದಿದ್ದರು.
ವಿಠಲ ಮಲೆಕುಡಿಯ ಕೇಸನ್ನು ಮಂಗಳೂರಿನ ಪ್ರಖ್ಯಾತ ವಕೀಲ ದಿನೇಶ್ ಹೆಗ್ಢೆ ಉಳೆಪಾಡಿಯವರು ವಾದಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post