ಕುಂದಾಪುರ: ಕಳೆದ ಸಾಲಿನಲ್ಲಿ ಬೈಂದೂರು, ಕುಂದಾಪುರ ಪರಿಸರದಲ್ಲಿ ಸಾವಿರಾರು ಪಂಜರ ಮೀನುಗಳ ಸಾವು ಸುದ್ದಿ ಮರೆಯುವ ಮುನ್ನಾ ಮತ್ತೆ ಅದೇ ರೀತಿಯಲ್ಲಿ ಈ ಬಾರಿ ಪಂಚಗಂಗಾವಳಿ ಹೊಳೆಯಲ್ಲಿ ಪಂಜರ ಮೀನುಗಳ ನಿಗೂಢ ಸಾವು ಮೀನು ಕೃಷಿಕರನ್ನು ಕಂಗಾಲನ್ನಾಗಿಸಿದೆ. ಕಳೆದ ಮೂರು ದಿನಗಳಿಂದ ಅಲ್ಲೊಂದು ಇಲ್ಲೊಂದು ಮೀನುಗಳು ಸಾಯುತ್ತಿದ್ದು, ಭಾನುವಾರ ಸಾವಿನ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಪಂಜರಕ್ಕೆ ಪಂಜರವೇ ಖಾಲಿಯಾಗುತ್ತಿದೆ.
ಹೋಟೆಲ್, ಆಸ್ಪತ್ರೆ ಸಮುಚ್ಚಯದ ನೀರನ್ನು ಪರಿಷ್ಕರಿಸದೆ ನೇರವಾಗಿ ಹೊಳೆಗೆ ಬಿಡುತ್ತಿರುವುದರಿಂದ ಕಲುಷಿತ ನೀರಿನಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಮೀನುಗಳು ಉಸಿರುಗಟ್ಟಿ ಸಾಯುತ್ತಿವೆ ಎಂದು ಪಂಜರ ಮೀನು ಕೃಷಿಕರು ಆರೋಪಿಸಿದ್ದಾರೆ. ಹೋಟೆಲ್ ತ್ಯಾಜ್ಯ ನೀರು ಸಂಸ್ಕರಿಸಿ ನದಿಗೆ ಬಿಡಬೇಕು ಎನ್ನುವ ನಿಯಮ ಪಾಲನೆಯಾಗುತ್ತಿಲ್ಲ. ಆಸ್ಪತ್ರೆ ತ್ಯಾಜ್ಯ ರಾಸಾಯನಿಕಯುಕ್ತ ನೀರು ಹೊಳೆ ಸೇರುವುದರಿಂದ ಪಂಜರ ಮೀನಿಗಷ್ಟೇ ಅಲ್ಲ ಜಲಜರಗಳಿಗೂ ಗಂಡಾಂತರ ಕಾದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ವೆಚ್ಚದ ಯುಜಿಡಿ ಕಾಮಗಾರಿ ಹಳ್ಳಹತ್ತಿದ್ದರಿಂದ ಕುಲಷಿತ ನೀರಿನ ಸಮಸ್ಯೆ ಸದ್ಯಕ್ಕೆ ಪರಿಹಾರ ಸಿಗುವ ಲಕ್ಷಣ ಕಾಣುತ್ತಿಲ್ಲ.
ಪಂಜಗಂಗಾವಳಿ ಸಂಗಮ ಪರಿಸರದಿಂದ ಬೊಬ್ಬುಕುದ್ರು ತನಕ ನೂರಾರು ಪಂಜರದಲ್ಲಿ ಮೀನು ಸಾಕಣೆ ಮಾಡುತ್ತಿದ್ದು, ಬರೋಬ್ಬರಿ ಒಂದು ಕೆಜಿ ತನಕ ತೂಕ ಬಂದ ಮೀನುಗಳು ಸಾಯುತ್ತಿವೆ. ಹತ್ತಾರು ಕುಟುಂಬಗಳು ಪಂಜರ ಮೀನು ಸಾಕಾಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಸತ್ತ ಮೀನುಗಳನ್ನು ಹೊಂಡ ತೆಗೆದು ಹೂಳುತ್ತಿದ್ದಾರೆ.