ಮಂಗಳೂರು: ಅಂಡರ್‌ವರ್ಲ್ಡ್ ಡಾನ್ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿ ಬಳಿಕ ತನ್ನದೇ ನಟೋರಿಯಸ್ ಗ್ಯಾಂಗ್ ಕಟ್ಟಿಕೊಂಡು ಮುಂಬೈಯಲ್ಲಿ ಬಾರ್ ಮಾಲೀಕರಿಂದ, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಕರಾವಳಿ ಮೂಲದ ಗ್ಯಾಂಗ್‌ಸ್ಟರ್ ಸುರೇಶ್ ಪೂಜಾರಿಯನ್ನು ಫಿಲಿಪ್ಪೀನ್ಸ್ ಪೊಲೀಸರು ಬಂಧಿಸಿದ್ದಾರೆ.
ಬಾಲಕನಾಗಿದ್ದಾಗಲೇ ಹೋಟೆಲ್ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದ ಸುರೇಶ್, ಕೆಲವರ್ಷಗಳ ಬಳಿಕ ಯಾವುದೇ ಕೇಸ್‌ನಲ್ಲಿ ಜೈಲು ಪಾಲಾಗಿದ್ದ. ಈ ವೇಳೆ ರವಿ ಪೂಜಾರಿಯ ಸಂಪರ್ಕಕ್ಕೆ ಬಂದಿದ್ದ. ಬಳಿಕ ಛೋಟಾ ರಾಜನ್ ಜತೆಗೂ ಇದ್ದ. ದಶಕದ ಹಿಂದೆ ಅವರಿಬ್ಬರಿಂದಲೂ ಅಂತರ ಕಾಯ್ದುಕೊಂಡು ತನ್ನದೇ ಗ್ಯಾಂಗ್ ಕಟ್ಟಿಕೊಂಡು ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ. ನವೀ ಮುಂಬೈ, ಮುಂಬೈ ಹಾಗೂ ಥಾಣೆಯಲ್ಲಿನ ಬಾರ್ ಮಾಲೀಕರಿಗೆ ಕರೆ ಮಾಡಿ ಹಫ್ತಾಕ್ಕಾಗಿ ಬೆದರಿಕೆ ಹಾಕುತ್ತಿದ್ದ. ಹಣ ಕೊಡದೆ ಇದ್ದರೆ ಕೊಲೆ ಬೆದರಿಕೆ ಹಾಕುತ್ತಿದ್ದ. ತನ್ನ ಸಹಚರರ ಮೂಲಕ ಬಾರ್‌ಗಳಿಗೆ ಶೂಟ್ ಮಾಡಿ ಹೆದರಿಸಿ ಹಣ ಲೂಟಿ ಮಾಡುತ್ತಿದ್ದ. 2015ರಲ್ಲಿ ಕೇಬಲ್ ಆಪರೇಟರ್ ಓರ್ವನನ್ನು ಕೊಲೆ ಮಾಡಿಸಿದ್ದ. 2018ರಲ್ಲಿ ಕಲ್ಯಾಣ್ ಭಿವಂಡಿಯ ಹೋಟೆಲ್‌ಗೆ ಶಾರ್ಪ್ ಶೂಟರ್‌ಗಳ ಮೂಲಕ ಗುಂಡು ಹಾರಿಸಿ ಅಲ್ಲಿದ್ದ ಸ್ವಾಗತಕಾರನನ್ನು ಕೊಲೆ ಮಾಡಿಸಿದ್ದ.
2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ತೆರಳಿದ್ದ ಸುರೇಶ್ ಪೂಜಾರಿ ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೆಲಸ ಮಾಡಿಸುತ್ತಿದ್ದ. ಆತನ ಪತ್ತೆಗೆ ಮುಂಬೈ ಪೊಲೀಸರು ಇಂಟರ್‌ಪೋಲ್ ನೋಟಿಸ್ ಜಾರಿ ಮಾಡಿದ್ದರು. ಮಲೇಷ್ಯಾ, ಕೆನಡಾ, ಫಿಲಿಪ್ಪೀನ್ಸ್ಸ್, ದುಬೈ ಮೊದಲಾದ ಕಡೆ ತನ್ನ ವಾಸ ಬದಲಾಯಿಸುತ್ತಿದ್ದ ಆತ 2020 ಸೆಪ್ಟೆಂಬರ್‌ನಿಂದ ಫಿಲಿಪ್ಪೀನ್ಸ್‌ನಲ್ಲಿ ನೆಲೆಸಿದ್ದ.
ಸುರೇಶ್ ಪೂಜಾರಿ ಬೇರೆ ದೇಶಗಳಿಗೆ ಹೋದಾಗಲೆಲ್ಲ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು, ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿ ಪ್ರಯಾಣಿಸುತ್ತಿದ್ದ. ಸುಮಾರು 8 ಪಾಸ್‌ಪೋರ್ಟ್‌ಗಳಿದ್ದು, ಸುರೇಶ್ ಪೂಜಾರಿ, ಸುರೇಶ್ ಪುರಿ, ಸತೀಶ್ ಪೈ, ಶೇಖರ್ ಪೈ ಮೊದಲಾದ ಹೆಸರುಗಳಿವೆ. ಈತನ ಮೂಲ ಉಡುಪಿ ಜಿಲ್ಲೆಯ ಮಲ್ಪೆ. ತಂದೆ ಬಸಪ್ಪ ದೇವಸ್ಥಾನದ ಪೂಜಾರಿಯಾಗಿದ್ದು, ಪುತ್ರನ ಜತೆ ಯಾವುದೇ ಸಂಬಂಧ ಹೊಂದಿಲ್ಲ. ಸುರೇಶ್‌ನ ಸಹೋದರಿ ಮದುವೆಯಾಗಿ ಥಾಣೆಯಲ್ಲಿ ನೆಲೆಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ಅಪರಾಧ ಕೃತ್ಯಗಳನ್ನು ಎಸಗಿರುವ ಮಾಹಿತಿ ಇಲ್ಲ. ಆದರೆ ಬೆಂಗಳೂರಿನಲ್ಲಿ ಕೆಲವು ಪ್ರಕರಣಗಳಿವೆ.
ರವಿ ಪೂಜಾರಿ ಸೆನೆಗಲ್‌ನಲ್ಲಿ ಬಂಧಿತನಾಗಿ ಬೆಂಗಳೂರಿಗೆ ಹಸ್ತಾಂತರವಾದ ಬಳಿಕ ಮುಂಬೈಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸುರೇಶ್ ಪೂಜಾರಿ ಹವಣಿಸಿದ್ದು, ಈ ಅವಧಿಯಲ್ಲೇ ಬಂಧನವಾಗಿದ್ದಾನೆ. ಶೀಘ್ರದಲ್ಲೇ ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.