ಮಂಗಳೂರು, ಅ.20: ಅಡ್ಯಾರ್ ಬಳಿಯ ಸಹ್ಯಾದ್ರಿ ಕಾಲೇಜು ಬಳಿ ತಪಾಸಣೆ ನಿರತ ಪೊಲೀಸರ ಮೇಲೆ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಹಾಯಿಸಲು ಯತ್ನಿಸಿದ ಘಟನೆ ನಡೆದಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಫ್ಸರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ ಮಂಗಳೂರು ಗ್ರಾಮಾಂತರ ಹಾಗೂ ಬಂಟ್ವಾಳ ಈ ಎರಡು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ನಸುಕಿನ ವೇಳೆ(ಮಧ್ಯರಾತ್ರಿ 2:30ರ ಸುಮಾರಿಗೆ) ಅಡ್ಯಾರ್ ಸಮೀಪದ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-75ರ ಕಡೆಗೆ ಮರಳು ಹೇರಿಕೊಂಡು ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯಿದ್ದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಅಡ್ಯಾರ್ ಸಮೀಪ ನಾಕಬಂದಿ ನಡೆಸಿ ವಾಹನ ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ಮರಳು ತುಂಬಿದ್ದ ಟಿಪ್ಪರ್ ಬಂದಿದೆ. ಕೂಡಲೇ ಅಲ್ಲಿದ್ದ ಪೊಲೀಸರು ಟಿಪ್ಪರ್ ಅನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಈ ವೇಳೆ ಮಂಗಳೂರು ಕಡೆಯಿಂದ ಬಂದ ಟಿಪ್ಪರ್ ಲಾರಿಯನ್ನು ಬ್ಯಾಟನ್ ಹಾಗೂ ಟಾರ್ಚ್‌ಲೈಟ್ ಸಹಾಯದಿಂದ ನಿಲ್ಲಿಸಲು ಬಂಟ್ವಾಳ ಪೊಲೀಸರು ಸೂಚಿಸಿದ್ದಾರೆ. ಆದಾಗ್ಯೂ, ಟಿಪ್ಪರ್ ಲಾರಿ ಚಾಲಕನು ಲಾರಿಯನ್ನು ವೇಗವಾಗಿ ಚಲಾಯಿಸಿ, ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲಾರಿಯ ಹಿಂದೆಯೇ ಮಂಗಳೂರು ಕಡೆಯಿಂದ ಆಲ್ಟೋ ಕಾರೊಂದನ್ನು ಅದರ ಚಾಲಕನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಅದು ಕೂಡ ಪೊಲೀಸರ ಸೂಚನೆಗೆ ನಿಲ್ಲಿಸದೇ ಇದ್ದು, ಆ ಕಾರು ಚಾಲಕನ ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರನ್ನು ನಿಲ್ಲಿಸದೇ ಹೋಗಿದ್ದಾರೆ. ದುಷ್ಕರ್ಮಿಗಳು ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮೇಲೆ ಲಾರಿಯನ್ನು ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಅಲ್ಲದೇ ಇಲಾಖಾ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆಸಿ, ಜಖಂಗೊಳಿಸಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳಿಕ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಬಗ್ಗೆ ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಫ್ಸರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಟಿಪ್ಪರ್ ಲಾರಿ, ಕಾರನ್ನು ವಶಪಡಿಸಿಕೊಳ್ಳಲಾಗಿದೆ.