ಮುಂಬೈ : ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದ, ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಸೂರತ್‌ನ ಹೋಟೆಲ್‌ನಲ್ಲಿ ತಂಗಿದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸರ್ಕಾರದ ಉಳಿವಿನ ಬಗ್ಗೆ ಈ ಬಂಡಾಯವು ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಂವಿಎಗೆ ಹಿನ್ನಡೆಯಾದ ಬಳಿಕ ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರಗತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟವಾಗಿರುವ ಎಂವಿಎ, ಪರಿಷತ್‌ನ ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ, ಎಂವಿಎ ಅಂಗ ಪಕ್ಷಗಳ ಶಾಸಕರು ಅಡ್ಡ ಮತದಾನ ಮಾಡಿದ ಕಾರಣ ಎಂವಿಎಯ ಆರನೇ ಅಭ್ಯರ್ಥಿಗೆ ಸೋಲಾಗಿದೆ. ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ, ಶಿಂಧೆ ಅವರು ಕೆಲವು ಶಾಸಕರ ಜತೆಗೆ ಗುಜರಾತ್‌ಗೆ ತೆರಳಿದ್ದಾರೆ.
ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿಯೂ ಎಂವಿಎ ಅಂಗ ಪಕ್ಷಗಳ ಶಾಸಕರು ಬಿಜೆಪಿ ಅಭ್ಯರ್ಥಿ ಪರವಾಗಿ ಅಡ್ಡ ಮತದಾನ ಮಾಡಿದ್ದರು. ಶಿಂಧೆ ಅವರ ಜತೆಗೆ 14–15 ಶಾಸಕರು ಇದ್ದಾರೆ ಎಂದು ಸೇನಾ ಸಂಸದ ಸಂಜಯ ರಾವುತ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಿವಸೇನಾದ ನಾಯಕ ಹುದ್ದೆಯಿಂದ ಶಿಂಧೆ ಅವರನ್ನು ವಜಾ ಮಾಡಲಾಗಿದೆ. ಅಜಯ್ ಚೌಧರಿ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ರಾವುತ್ ತಿಳಿಸಿದ್ದಾರೆ.ಬಂಡಾಯ ಶಮನದಲ್ಲಿಯೂ ಎಂವಿಎ ತೊಡಗಿದೆ. ಮುಖಂಡರಾದ ಮಿಲಿಂದ್ ನಾರ್ವೇಕರ್ ಮತ್ತು ರವೀಂದ್ರ ಪಾಠಕ್ ಅವರನ್ನು ಸೂರತ್‌ಗೆ ಕಳುಹಿಸಿದ್ದು, ಶಿಂಧೆ ಮನವೊಲಿಸುವ ಹೊಣೆಯನ್ನು ಅವರಿಗೆ ವಹಿಸಲಾಗಿದೆ. ತಮ್ಮ ಯೋಜನೆಗಳೇನು ಎಂಬುದನ್ನು ಶಿಂಧೆ ಅವರು ಬಹಿರಂಗಪಡಿಸಿಲ್ಲ.
ಶಿವಸೇನಾದಲ್ಲಿನ ಬೆಳವಣಿಗೆಯೊಂದಿಗೆ ಬಿಜೆಪಿಗೆ ಯಾವುದೇ ನಂಟು ಇಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ. ಪರ್ಯಾಯ ಸರ್ಕಾರ ರಚಿಸುವುದಕ್ಕಾಗಿ ಶಿಂಧೆ ಅವರು ತಮ್ಮನ್ನು ಸಂಪರ್ಕಿಸಿದರೆ, ಖಂಡಿತವಾಗಿಯೂ ಅದನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ. ‘ಹಿಂದುತ್ವದ ಪಾಠ ಹೇಳಿಕೊಟ್ಟ ಬಾಳಾಸಾಹೇಬ್ ಅವರ ನಿಷ್ಠಾವಂತ ಶಿವ ಸೈನಿಕರು ನಾವು. ಅಧಿಕಾರಕ್ಕಾಗಿ ನಾವು ವಂಚಿಸುವುದಿಲ್ಲ. ಬಾಳಾಸಾಹೇಬ್ ಮತ್ತು ಆನಂದ್ ದಿಘೆ ಅವರ ಸಿದ್ಧಾಂತಗಳನ್ನು ಅಧಿಕಾರಕ್ಕಾಗಿ ಕೈಬಿಡುವುದಿಲ್ಲ’ ಎಂದು ಶಿಂಧೆ ಟ್ವೀಟ್ ಮಾಡಿದ್ದಾರೆ. ಬಾಳಾಸಾಹೇಬ್ ಅವರು ಸೇನಾ ಸಂಸ್ಥಾಪಕ. ದಿಘೆ ಅವರು ಠಾಣೆ ಪ್ರದೇಶ ದಲ್ಲಿ ಸೇನಾದ ಪ್ರಭಾವಿ ಮುಖಂಡರಾಗಿದ್ದರು. ದಿಘೆ ಮಾರ್ಗದರ್ಶನದಲ್ಲಿಯೇ ಶಿಂಧೆ ಅವರು ಬೆಳೆದುಬಂದಿದ್ದಾರೆ.
ಮಹಾರಾಷ್ಟ್ರದ ಸರ್ಕಾರವನ್ನು ಉರುಳಿಸುವ ಮೂರನೇ ಪ್ರಯತ್ನ ನಡೆದಿದೆ ಎಂದು ಎಂವಿಎಯ ಎರಡನೇ ಅತೀ ದೊಡ್ಡ ಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಇದು ಸೇನಾದ ಆಂತರಿಕ ವಿಚಾರವಾಗಿದ್ದು, ಉದ್ಧವ್ ಅವರು ಅದನ್ನು ನಿಭಾಯಿಸಲಿದ್ದಾರೆ ಎಂದಿದ್ದಾರೆ.
ಹೋಟೆಲ್‌ಗೆ ಬಿಗಿ ಭದ್ರತೆ ; ಸೇನಾ ಶಾಸಕರು ತಂಗಿರುವ ಸೂರತ್‌ನ ಲಿ ಮೆರೀಡಿಯನ್ ಹೋಟೆಲ್‌ಗೆ ಭಾರಿ ಭದ್ರತೆ ಒದಗಿಸಲಾಗಿದೆ. 300–400 ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪರಿಶೀಲನೆಯ ಬಳಿಕವೇ ಜನರನ್ನು ಒಳಕ್ಕೆ ಕಳುಹಿಸಲಾಗುತ್ತಿದೆ. ಹೋಟೆಲ್‌ನ ಒಳಗಡೆಯೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post