ಆರು ವರ್ಷದ ಬಾಲಕನನ್ನು ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ಅಮೆರಿಕ ದೇಶದಿಂದಲೇ ಪರಾರಿಯಾಗಿ ಭಾರತದಲ್ಲಿ ಅಡಗಿಕೊಂಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಎಫ್‌ಬಿಐನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಪ್ರಮುಖ ಹತ್ತು ಜನರ ಪೈಕಿ 40 ವರ್ಷ ವಯಸ್ಸಿನ ಸಿಂಡಿ ರೊಡ್ರಿಗಸ್ ಸಿಂಗ್ ಕೂಡ ಒಬ್ಬರು. ಅಮೆರಿಕದ ಟೆಕ್ಸಾಸ್‌ನಲ್ಲಿ ತನ್ನ ಆರು ವರ್ಷದ ಮಗ ನೋಯೆಲ್ ಅಲ್ವಾರೆಜ್‌ನನ್ನು ಕೊಲೆ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ. ಸುಮಾರು ಎರಡು ವರ್ಷಗಳಿಂದ ಸಿಂಡಿ ರೊಡ್ರಿಗಸ್ ತಲೆಮರೆಸಿಕೊಂಡಿದ್ದರು.
ತನ್ನ ಆರು ವರ್ಷದ ಮಗನನ್ನು ಕೊಲೆ ಮಾಡಿ, ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಮೆರಿಕದ ಮಹಿಳೆಯನ್ನು ಎಫ್‌ಬಿಐ ಭಾರತದಲ್ಲಿ ಬಂಧಿಸಿದೆ. ಎಫ್‌ಬಿಐನ ’10 ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದ ಈ ಮಹಿಳೆಯ ಬಂಧನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. 40 ವರ್ಷ ವಯಸ್ಸಿನ ಸಿಂಡಿ ರೊಡ್ರಿಗಸ್ ಸಿಂಗ್ ಬಂಧಿತ ಆರೋಪಿ. ಅಮೆರಿಕದ ಟೆಕ್ಸಾಸ್‌ನಲ್ಲಿ ತನ್ನ ಆರು ವರ್ಷದ ಮಗ ನೋಯೆಲ್ ಅಲ್ವಾರೆಜ್‌ನನ್ನು ಕೊಲೆ ಮಾಡಿದ ಆರೋಪ ಈಕೆಯ ಮೇಲಿದೆ. 2022ರ ಅಕ್ಟೋಬರ್‌ನಿಂದ ಬಾಲಕ ನೋಯೆಲ್ ನಾಪತ್ತೆಯಾಗಿದ್ದ.
ನೋಯೆಲ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಮತ್ತು ಉಸಿರಾಟಕ್ಕೆ ಪ್ರತ್ಯೇಕವಾಗಿ ಆಕ್ಸಿಜನ್ ಪೂರೈಕೆಯನ್ನು ಅವಲಂಬಿಸಿದ್ದ. ಬಹಳ ಸಮಯದಲ್ಲಿ ಆತ “ಅನಾರೋಗ್ಯದಿಂದ ಮತ್ತು ಅಪೌಷ್ಟಿಕತೆಯಿಂದ” ಬಳಲುತ್ತಿದ್ದಂತೆ ಕಾಣುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. 2023ರ ಮಾರ್ಚ್ 20 ರಂದು, ಟೆಕ್ಸಾಸ್‌ನ ಕುಟುಂಬ ಮತ್ತು ಸಂರಕ್ಷಣಾ ಸೇವೆಗಳ ಇಲಾಖೆಯ ಕೋರಿಕೆಯ ಮೇರೆಗೆ ಎವರ್‌ಮನ್ ಪೊಲೀಸರು ನೋಯೆಲ್‌ನ ಯೋಗಕ್ಷೇಮವನ್ನು ಪರಿಶೀಲಿಸೋಕೆ ಅವರ ಮನೆಗೆ ಭೇಟಿ ನೀಡಿದ್ದರು.
ಮಕ್ಕಳೊಂದಿಗೆ ಭಾರತಕ್ಕೆ ಪರಾರಿಯಾಗಿದ್ದ ತಾಯಿ : ಈ ಸಂದರ್ಭದಲ್ಲಿ ಮಹಿಳೆ ಸಿಂಡಿ ರೊಡ್ರಿಗಸ್ ಸಿಂಗ್, ತನ್ನ ಮಗ ಮೆಕ್ಸಿಕೋದಲ್ಲಿ ಅವನ ತಂದೆಯೊಂದಿಗೆ ವಾಸಿಸುತ್ತಿದ್ದಾನೆ ಅಂತ ಪೊಲೀಸರಿಗೆ ಸುಳ್ಳು ಹೇಳಿದ್ದಳು. ಆ ವಿಚಾರಣೆ ನಡೆದ ಎರಡೇ ದಿನಗಳಲ್ಲಿ, ಅಂದರೆ ಮಾರ್ಚ್ 22, 2023 ರಂದು, ಸಿಂಡಿ ತನ್ನ ಪತಿ ಅರ್ಶದೀಪ್ ಸಿಂಗ್ ಮತ್ತು ತನ್ನ ಆರು ಮಕ್ಕಳೊಂದಿಗೆ ಭಾರತಕ್ಕೆ ವಿಮಾನ ಏರಿದ್ದಳು. ಆದರೆ, ಆ ವಿಮಾನದಲ್ಲಿ ನೋಯೆಲ್ ಇರಲಿಲ್ಲ. ಅಷ್ಟೇ ಅಲ್ಲ, ಆ ತಾಯಿ ಮಗ ನೋಯೆಲ್‌ನನ್ನು ಬಿಟ್ಟು ತನ್ನ ಉಳಿದ ಎಲ್ಲ ಮಕ್ಕಳಿಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.
ಮಹಿಳೆಯ ಪತ್ತೆಗೆ $250,000 ಬಹುಮಾನ ಘೋಷಣೆ : ಬಾಲಕ ನೋಯೆಲ್‌ನ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ಆದರೆ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. 2023ರ ಅಕ್ಟೋಬರ್‌ನಲ್ಲಿ, ಟ್ಯಾರಂಟ್ ಕೌಂಟಿ ನ್ಯಾಯಾಲಯವು ಸಿಂಡಿ ವಿರುದ್ಧ 10 ವರ್ಷದೊಳಗಿನ ಮಗುವನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು. ತನಿಖೆಯಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಪರಾರಿಯಾಗಿದ್ದಕ್ಕೆ ಆರೋಪಿಯ ವಿರುದ್ಧ ಬಂಧನ ವಾರಂಟ್ ಕೂಡ ಜಾರಿಯಾಗಿತ್ತು. ಈ ವರ್ಷ ಜುಲೈನಲ್ಲಿ, ಎಫ್‌ಬಿಐ ಸಿಂಡಿಯನ್ನು ತನ್ನ ’10 ಮೋಸ್ಟ್ ವಾಂಟೆಡ್’ ಪಟ್ಟಿಗೆ ಸೇರಿಸಿತ್ತು. ಹಾಗೇ ಸಿಂಡಿ ರೊಡ್ರಿಗಸ್ ಸಿಂಗ್ ಬಗ್ಗೆ ಮಾಹಿತಿ ನೀಡಿದವರಿಗೆ 2,50,000 ಡಾಲರ್‌ಗಳ ಬಹುಮಾನ ಘೋಷಿಸಿತ್ತು.
ಎಫ್‌ಬಿಐ, ಇಂಟರ್‌ಪೋಲ್ ಮತ್ತು ಭಾರತೀಯ ಅಧಿಕಾರಿಗಳ ಸಂಘಟಿತ ಕಾರ್ಯಾಚರಣೆಯ ಫಲವಾಗಿ ಸಿಂಡಿಯನ್ನು ಭಾರತದಲ್ಲಿ ಬಂಧಿಸಲಾಗಿದೆ. ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಈ ಸುದ್ದಿಯನ್ನು ಖಚಿತಪಡಿಸಿದ್ದು, ಟೆಕ್ಸಾಸ್, ನ್ಯಾಯಾಂಗ ಇಲಾಖೆ ಮತ್ತು ಭಾರತದಲ್ಲಿ ಸಹಕಾರ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ ಏಳು ತಿಂಗಳಲ್ಲಿ ಬಂಧಿಸಲ್ಪಟ್ಟ ‘ಟಾಪ್ 10 ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿರುವ ನಾಲ್ಕನೇ ವ್ಯಕ್ತಿ ಈಕೆ ಎಂದು ಅವರು ತಿಳಿಸಿದ್ದಾರೆ.
ಬಂಧನದ ನಂತರ ಆರೋಪಿ ಮಹಿಳೆಯನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದ್ದು, ಟೆಕ್ಸಾಸ್ ಅಧಿಕಾರಿಗಳಿಗೆ ಆಕೆಯನ್ನು ಒಪ್ಪಿಸಲಾಗುತ್ತಿದೆ.ಆಕೆ ತನ್ನ ಮಗನ ಕೊಲೆ ಆರೋಪದ ಮೇಲೆ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಲಿದ್ದಾಳೆ. ಮಗನ ಆರೋಗ್ಯ ಸಮಸ್ಯೆಯು ಹೆಚ್ಚಾದ ಕಾರಣಕ್ಕೆ ಆತನನ್ನು ಮುಗಿಸುವ ನಿರ್ಧಾರಕ್ಕೆ ಈ ತಾಯಿ ಬಂದಳೇ, ಅಥವಾ ಆಕೆಯ ಆರೈಕೆಯಲ್ಲಿ ಉಂಟಾದ ಲೋಪದಿಂದಲೇ ಬಾಲಕನಿಗೆ ಅನಾರೋಗ್ಯ ಕಾಡಿತ್ತಾ? ಆಕೆ ಮಗನ ಉಸಿರನ್ನೇ ನಿಲ್ಲಿಸಿದ್ದೇಕೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
Discover more from Coastal Times Kannada
Subscribe to get the latest posts sent to your email.
Discussion about this post