ಮಂಗಳೂರು: ಬೀದಿ ವ್ಯಾಪಾರದ ಜಾಗದಲ್ಲಿ ಅನಧಿಕೃತ ಆಟೋ ರಿಕ್ಷಾ ಪಾರ್ಕ್ ನಿರ್ಮಾಣ ಮಾಡಿ ಮಹಿಳಾ ಬೀದಿಬದಿ ವ್ಯಾಪಾರಿಯೊಬ್ಬರಿಗೆ ಕಿರುಕುಳ ನೀಡುತ್ತಿದ್ದು, ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆ.22 ರ ಶುಕ್ರವಾರ ಬೆಳಕಿಗೆ ಬಂದಿದೆ. ಶಾಲಿನಿ (48ವರ್ಷ) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಆಟೋ ರಿಕ್ಷಾ ಚಾಲಕರ ಸಂಘ ಮತ್ತು ಪಾಲಿಕೆ ಅಧಿಕಾರಿಗಳಿಂದ ಕಳೆದ 1 ತಿಂಗಳಿಂದ ನಿರಂತರ ತೊಂದರೆ ನೀಡಿ ಶಾಲಿನಿ ಅವರು ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತಿತ್ತು. ಪಾಲಿಕೆ ಅಧಿಕಾರಿಗಳು ಆಟೋ ಪಾರ್ಕಿಗೆ ಅನುಮತಿ ನೀಡದಿದ್ದರೂ ರಾಜಕೀಯ ಒತ್ತಡದಿಂದ ತೆರವುಗೊಳಿಸಲು ಬಲವಂತಪಡಿಸಲಾಗುತ್ತಿತ್ತು ಎನ್ನಲಾಗಿದೆ. ವ್ಯಾಪಾರದಲ್ಲಿ ಅಪಾರ ನಷ್ಟ ಮತ್ತು ಕಿರುಕುಳ ತಾಳಲಾರದೆ ಬೀದಿಬದಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಜೀವಿಸುತ್ತಿದ್ದ ಶಾಲಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ಈಕೆಯ ಪರಿಸ್ಥಿತಿ ಗಂಭೀರವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಐ.ಸಿ.ಯು. ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಬೋಂದೆಲ್ ಜಂಕ್ಷನ್ ಬಳಿ ಏರ್ ಪೋರ್ಟ್ ರಸ್ತೆಯಲ್ಲಿ ಪಾಲಿಕೆಯ ಅನುಮತಿ ಇಲ್ಲದೆ ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಅನಧಿಕೃತ ರಿಕ್ಷಾ ಪಾರ್ಕ್ ನಿರ್ಮಾಣಗೊಂಡ ನಂತರ ಈ ಬೆಳವಣಿಗೆ ನಡೆಯುತ್ತಿದೆ. ಶಾಲಿನಿ ಅವರು ಕಳೆದ 15 ವರ್ಷದಿಂದ ಬೋಂದೆಲ್ ಕಟ್ಟೆ ಬಳಿ ಹೂ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ರಿಕ್ಷಾ ನಿಲ್ದಾಣ ಇತ್ತೀಚಿಗೆ ನಿರ್ಮಾಣವಾಗಿದ್ದು, ಹೂ ಮಾರುವ ಟೇಬಲ್ ಎದುರು ಆಟೋ ರಿಕ್ಷಾವನ್ನು ಅಡ್ಡಕ್ಕೆ ಇಟ್ಟು ವ್ಯಾಪಾರಕ್ಕೆ ಅಡಚಣೆ ಉಂಟು ಮಾಡುತ್ತಿದ್ದು, ಇದರಿಂದ ನೊಂದ ಮಹಿಳೆ ಈಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆಟೋ ರಿಕ್ಷಾ ನಿಲ್ದಾಣದ ಹೆಸರಿನಲ್ಲಿ ಬೀದಿ ವ್ಯಾಪಾರಕ್ಕೆ ಅನಗತ್ಯ ತೊಂದರೆ ಮತ್ತು ಪಾಲಿಕೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಆರೋಪಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ತೀವ್ರವಾಗಿ ಖಂಡಿಸಿದೆ ಮತ್ತು ಮಹಿಳೆಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಪಾಲಿಕೆಯ ಅನುಮೋದನೆ ಇಲ್ಲದೆ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನಧಿಕೃತವಾಗಿ ನಿರ್ಮಿಸಿರುವ ಆಟೋ ರಿಕ್ಷಾ ನಿಲ್ದಾಣದ 50ಮೀಟರ್ ದೂರದಲ್ಲಿ ಶಿಸ್ತುಬದ್ದವಾಗಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದರೂ, ಮಹಿಳೆಗೆ ಅವಮಾನ ಆಗುವ ರೀತಿಯಲ್ಲಿ ನಿಂದನೆ ಮಾಡುವುದು ಮತ್ತು ಮಹಿಳೆಯ ಸ್ಟಾಲಿಗೆ ಅಡ್ಡಲಾಗಿ ರಿಕ್ಷಾ ನಿಲ್ಲಿಸುವುದು ,ಅವರ ಸರಕುಗಳನ್ನು ಹಾನಿ ಮಾಡುವುದು, ಬೆದರಿಕೆ ಹಾಕುವುದು ಮತ್ತು ರಾಜಕೀಯ ಪ್ರಭಾವ ಬಳಸಿಕೊಂಡು ಅಧಿಕಾರಿಗಳಿಂದ ಎಚ್ಚರಿಕೆ ನೀಡುವಂತ ರೀತಿಯಲ್ಲಿ ಮಹಿಳೆಯ ಮೇಲೆ ನಿರಂತರ ಮಾನಸಿಕ ಕಿರುಕುಳ ನೀಡಿರುವ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನ ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post