ಮಂಗಳೂರು : ಈ ಹಿಂದೆ ಭಾಷಣದ ವೇಳೆ ‘ನನಗೆ ಮುಸ್ಲಿಂರ ಮತಗಳು ಬೇಡ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿಂದು ಅಲ್ಪಸಂಖ್ಯಾತರ ಸಮಾವೇಶ ನಡೆದಿದೆ. ಇದನ್ನು ಟೀಕಿಸಿ ಸಿಪಿಐ ಕಾರ್ಯಕರ್ತರೊಬ್ಬರು ಮುಸ್ಲಿಂರ ಬಿಳಿ ಟೋಪಿ ಮತ್ತು ಹಸಿರು ಶಾಲನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ ‘ನನಗೆ ಮುಸ್ಲಿಂರ ಮತಗಳು ಬೇಡ’ ಎಂದು ಭಾಷಣ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಮೋದಿ ಸರ್ಕಾರದ ಆಡಳಿತದ ಎಂಟನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ಅಲ್ಪಸಂಖ್ಯಾತ ಬಂಧುಗಳ ಸಮಾವೇಶ ಆಯೋಜಿಸಲಾಗಿತ್ತು. ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಈ ಸಮಾವೇಶ ನಡೆಸಲಾಗಿದೆ.
ಮುಸ್ಲಿಂರ ಮತಗಳು ನನಗೆ ಬೇಡ ಎಂದು ಭಾಷಣ ಮಾಡಿದ್ದ ಶಾಸಕ ಹರೀಶ್ ಪೂಂಜಾ ಅವರು ಅಲ್ಪಸಂಖ್ಯಾತರ ಸಮಾವೇಶ ನಡೆಸುತ್ತಿರುವುದಕ್ಕೆ ವ್ಯಂಗ್ಯವಾಡಿ ಸಿಪಿಐ ಕಾರ್ಯಕರ್ತ ಶೇಖರ್ ಲಾಯಿಲಾ ಅವರು ಶಾಸಕರ ಕಚೇರಿಗೆ ಮುಸ್ಲಿಂರ ಟೋಪಿ, ಹಸಿರು ಶಾಲು ರವಾನಿಸಿದ್ದಾರೆ. ಇದರ ಜೊತೆಗೆ ಶಾಸಕರಿಗೆ ಪತ್ರ ಕೂಡ ಬರೆದಿದ್ದಾರೆ.