ಖ್ಯಾತ ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ನಟಿಸಿರುವ ಮೊದಲ ಸಿನಿಮಾ ‘ಮಹಾರಾಜ್’ ಸಾಕಷ್ಟು ವಿಘ್ನಗಳನ್ನು ಎದುರಿಸಿದೆ. ಈ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಅನೇಕರು ತಕರಾರು ತೆಗೆದಿದ್ದರು. ಅಲ್ಲದೇ, ನ್ಯಾಯಾಲಯ ಕೂಡ ಈ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ನೀಡಿತ್ತು. ಹಾಗಾಗಿ ರಿಲೀಸ್ ಮುಂದೂಡಲಾಗಿತ್ತು. ಆದರೆ ಈಗ ‘ಮಹಾರಾಜ್’ ಸಿನಿಮಾವನ್ನು ರಿಲೀಸ್ ಮಾಡಬಹುದು ಎಂದು ಗುಜರಾತ್ ಹೈಕೋರ್ಟ್ ಆದೇಶ ನೀಡಿದೆ. ತಡೆಯಾಜ್ಞೆ ತೆರವುಗೊಳ್ಳುತ್ತಿದ್ದಂತೆಯೇ ‘ನೆಟ್ಫ್ಲಿಕ್ಸ್’ (Netflix) ಒಟಿಟಿ ಮೂಲಕ ಈ ಸಿನಿಮಾ ಬಿಡುಗಡೆ ಆಗಿದೆ.
ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ ಮೂಲಕ ‘ಮಹಾರಾಜ್’ ಸಿನಿಮಾ ನಿರ್ಮಾಣ ಆಗಿದೆ. ಇದು ಜುನೈದ್ ಖಾನ್ ನಟನೆಯ ಮೊದಲ ಸಿನಿಮಾ. ‘ಪಾತಾಳ್ ಲೋಕ್’ ಖ್ಯಾತಿಯ ಜೈದೀಪ್ ಅಹಲಾವತ್ ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಆಗುವಂತಹ ಅಂಶಗಳು ಇವೆ ಎಂದು ಕೆಲವರು ಕೇಸ್ ಹಾಕಿದ್ದರು.
ಸೌರಭ್ ಶಾ ಬರೆದ ‘ಮಹಾರಾಜ್’ ಪುಸ್ತಕವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. 2013ರಿಂದಲೂ ಈ ಪುಸ್ತಕ ಲಭ್ಯವಿದೆ. ಈ ಪುಸ್ತಕದಿಂದ ಯಾವುದೇ ಗಲಭೆ ಆಗಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಹಾಗಿದ್ದಮೇಲೆ ‘ಮಹಾರಾಜ್’ ಸಿನಿಮಾ ಕೂಡ ಯಾವುದೇ ಗಲಭೆಗೆ ಕಾರಣ ಆಗುವುದಿಲ್ಲ ಎಂದು ನಿರ್ಮಾಪಕರ ಪರ ಲಾಯರ್ ವಾದಿಸಿದರು. ವಾದ ಆಲಿಸಿದ ಬಳಿಕ ಕೋರ್ಟ್ ಈ ಆದೇಶ ನೀಡಿದೆ.
‘ಮಹಾರಾಜ್’ ಸಿನಿಮಾವನ್ನು ವೀಕ್ಷಿಸುವಂತೆ ನ್ಯಾಯಾಧೀಶರಿಗೆ ನಿರ್ಮಾಪಕರು ಮನವಿ ಮಾಡಿಕೊಂಡಿದ್ದರು. ಮನವಿ ಒಪ್ಪಿದ ನ್ಯಾಯಾಧೀಶರು ಸಿನಿಮಾ ವೀಕ್ಷಿಸಿದ ಬಳಿಕ ಇದರಲ್ಲಿ ಹಿಂದೂ ಧರ್ಮದವರ ಭಾವನೆಗೆ ಧಕ್ಕೆ ಆಗುವಂತಹ ಯಾವುದೇ ಅಂಶಗಳು ಇಲ್ಲ ಎಂದು ಹೇಳಿದ್ದಾರೆ. ನ್ಯಾಯಾಲಯದ ತೀರ್ಪು ಹೊರಬಿದ್ದ ಬಳಿಕ ನೆಟ್ಫ್ಲಿಕ್ಸ್ ಈ ಸಿನಿಮಾವನ್ನು ರಿಲೀಸ್ ಮಾಡಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post