ಮಂಡ್ಯ: ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಆರು ತಿಂಗಳ ನಂತರ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ಗೆ ಸಿಲುಕಿದವರು. ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದರು. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದಿದ್ದಾರೆ. ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ಜಗನ್ನಾಥ್ ತೆರಳಿದ್ದರು. ಆದರೆ, ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಇದರಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬುವರನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸಾಮಾನ್ಯ ಜ್ಞಾನವುಳ್ಳ ವ್ಯಕ್ತಿ ಮಧ್ಯರಾತ್ರಿಯಲ್ಲಿ ಯಾರೋ ಕರೆದರು ಎಂದರೆ ಹೋಗುತ್ತಾರಾ? ಅವರು ಉದ್ಯಮಿಯಾಗಿದ್ದು ಅಪಾಯಗಳು ಇರುತ್ತವೆ. ಈ ಕನಿಷ್ಠ ತಿಳಿವಳಿಕೆ ಅವರಿಗೆ ಇರಲಿಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು. ಶ್ರೀನಿವಾಸ ಶೆಟ್ಟರ ಹೆಸರು ಬಳಕೆ: ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಡಾ.ಶ್ರೀನಿವಾಸ ಶೆಟ್ಟಿ ಅವರ ಮೂಲಕ ₹ 25 ಲಕ್ಷ ಹಣ ತಂದು ಆರೋಪಿಗಳಿಗೆ ನೀಡಲಾಯಿತು ಎಂದು ಜಗನ್ನಾಥ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಯಾಗಿರುವ ಶ್ರೀನಿವಾಸ ಶೆಟ್ಟರ ಹೆಸರನ್ನು ಪ್ರಕರಣದಲ್ಲಿ ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಸಾಕಷ್ಟು ಅನುಮಾನಗಳು ಪೊಲೀಸರಲ್ಲಿ ಮೂಡಿವೆ. ಶ್ರೀನಿವಾಸ ಶೆಟ್ಟಿ ಸೇರಿದಂತೆ ದೂರಿನಲ್ಲಿ ನಮೂದಿಸಿರುವ ರಾಜಶ್ರೀ ಜುವೆಲರ್ಸ್, ಸೂರ್ಯ ಜುವೆಲ್ಲರ್ಸ್ ಮಾಲೀಕರನ್ನು ಕರೆದು ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು. ಅಪಹರಣ, ಹಣ ದರೋಡೆ ಸೇರಿದಂತೆ ಜಗನ್ನಾಥ ಶೆಟ್ಟಿ ಅವರನ್ನು ಹನಿಟ್ರ್ಯಾಪ್ ಮಾಡಿರಬಹುದು ಎಂಬ ಬಗ್ಗೆಯೂ ಪೊಲೀಸರಲ್ಲಿ ಅನುಮಾನಗಳು ಇದ್ದು ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post