ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಕಾಡಂಚಿನ ಗ್ರಾಮದಲ್ಲಿರುವ ಒಂಟಿ ಮನೆಗೆ ಮಂಗಳವಾರ ರಾತ್ರಿ ಅಪರಿಚಿತರ ತಂಡವೊಂದು ಲಗ್ಗೆ ಇಟ್ಟಿದೆ. ಒಬ್ಬ ಮಹಿಳೆಯೂ ಸೇರಿದಂತೆ ಐದು ಮಂದಿ ಅಪರಿಚಿತರು ನಕ್ಸಲರೇ ಇರಬಹುದು ಎಂದು ಆ ಮನೆಯವರು ಆಪಾದಿಸಿದ್ದರೆ, ಪೊಲೀಸರು ಬೇರೆಯೇ ಕಥೆ ಹೇಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕುತ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಪುಂಜಾಜೆ ಮನೆ ನಿವಾಸಿ ಜೋಸಿ ಆಂಟನಿ ಎಂಬವರ ಮನೆಗೆ ಮಧ್ಯರಾತ್ರಿಯ ಹೊತ್ತು ಓರ್ವ ಮಹಿಳೆ ಸೇರಿ ಐದು ಜನ ಅಪರಿಚಿತರ ತಂಡ. ಆಗಮಿಸಿದೆ.
ಮಹಿಳೆ ಖಾಕಿ ಬಟ್ಟೆ ಧರಿಸಿದ್ದರೆ, ಪುರುಷರು ನೀಲಿ ಬಣ್ಣದ ಬಟ್ಟೆ ಧರಿಸಿದ್ದರು. ಕೈಯಲ್ಲಿ ಮಾರಕಸ್ತ್ರಗಳನ್ನು ಹಿಡಿದು ಬಂದಿದ್ದರು ಎಂದು ಜೋಸಿ ಆಂಟನಿ ಹೇಳುತ್ತಾರೆ. ತಾವು ವೇಣೂರು ಪೊಲೀಸರು ಅಂತ ಪರಿಚಯ ಮಾಡಿಕೊಂಡ ತಂಡ ಬಾಗಿಲು ತೆಗೆಯಿರಿ ಅಂತ ಹೇಳಿದೆ. ಬಾಗಿಲು ತೆಗೆಯದೆ ಇದ್ದಾಗ ಹಾರೆಯಿಂದ ಬಾಗಿಲನ್ನು ತೆಗೆಯಲು ಪ್ರಯತ್ನ ಮಾಡಿದೆ ಎಂದು ಆರೋಪಿಸಲಾಗಿದೆ. ಕೊನೆಗೆ ಬಂದವರು ಹೊರಟು ಹೋಗಿದ್ದಾರೆ ಎಂದು ಜೋಸಿ ಆಂಟನಿ ಹೇಳುತ್ತಾರೆ.
ಹೋದವರು ನಕ್ಸಲರಲ್ಲ ಎಂದ ಜಿಲ್ಲಾ ಎಸ್ಪಿ : ಆದರೆ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಇದರ ಬಗ್ಗೆ ಬೇರೆಯೇ ಕಥೆ ಹೇಳುತ್ತಾರೆ. ಕುತ್ಲೂರಿನ ಮನೆಗೆ ಭೇಟಿ ನೀಡಿದವರು ನಕ್ಸಲರಲ್ಲ. ಅವರು ಪೊಲೀಸರು ಎನ್ನುವುದು ಜಿಲ್ಲಾ ಎಸ್‌ಪಿ ರಿಷ್ಯಂತ್ ಅವರ ಹೇಳಿಕೆ.
ಬೆಂಗಳೂರು ನಿವಾಸಿ ಶರತ್ ಕುಮಾರ್ ಎಂಬವರಿಗೆ ಜಮೀನು ಮಾರಾಟ ಮಾಡುವ ವಿಚಾರದಲ್ಲಿ ಜೋಸಿ ಆಂಟನಿ ವಿರುದ್ಧ ದೂರು ದಾಖಲಾಗಿತ್ತು. ಹಣ ವಂಚನೆ ವಿಚಾರಕ್ಕೆ ಸಂಬಂಧಿಸಿ ಆರೋಪಿಯನ್ನು ಠಾಣೆಗೆ ಬರುವಂತೆ ಹಲವು ಬಾರಿ ಸೂಚಿಸಲಾಗಿತ್ತು. ಹಲವು ಬಾರಿ ಮನೆ ಹೋದರೂ ಸಿಕ್ಕಿರಲಿಲ್ಲ. ಹೀಗಾಗಿ ಮೂಡಬಿದ್ರೆ ಪೊಲೀಸರು ಆರೋಪಿ ಬೆಳಗ್ಗೆ ಸಿಗಲ್ಲ ಎಂದು ರಾತ್ರಿಯೇ ಹೋಗಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಮನೆಗೆ ಭೇಟಿ ನೀಡಿದ ತಂಡದಲ್ಲಿ ಇಬ್ಬರು ಹೆಡ್ ಕಾನ್ಸ್‌ಟೇಬಲ್‌ಗಳು ಓರ್ವ ಮಹಿಳಾ ಪೊಲೀಸ್ ಮತ್ತು ದೂರುದಾರರು ಇದ್ದರು. ತಾವು ಪೊಲೀಸರು ಎಂದು ಆತನಿಗೆ ಸ್ಪಷ್ಟವಾಗಿ ಅರಿವು ಮಾಡಲಾಗಿದೆ. ಆದರೂ ಜೋಸಿ ಆಂಟನಿ ನಕ್ಸಲರೇ ಮನೆಗೆ ಬಂದಿದ್ದಾರೆ ಎಂಬಂತೆ ನಾಟಕವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಕಾಸರಗೋಡು ಭಾಗದಲ್ಲಿ ನಕ್ಸಲ್ ಕಾಣಿಸಿಕೊಂಡ ಬಗ್ಗೆ ವರದಿ ಹಿನ್ನಲೆಯಲ್ಲಿ ಅಲರ್ಟ್ ಆಗಿದ್ದ ನಕ್ಸಲ್ ನಿಗ್ರಹ ದಳದ ಪೊಲೀಸರು ಇದ್ದಾರೆ ಎಂದು ಅರಿತ್ತಿದ್ದ ಜೋಸಿ ನಕ್ಸಲ್ ಬಂದಿದ್ದಾರೆ ಎಂದು ಹೇಳಿ ಪೊಲೀಸರನ್ನೇ ಯಾಮಾರಿಸಲು ಯತ್ನಿಸಿದ್ದಾನೆ.
ಇದೀಗ ಮೂಡುಬಿದರೆ ಪೊಲೀಸರು, ಬೆಳ್ತಂಗಡಿ ಮತ್ತು ವೇಣೂರು ಪೊಲೀಸರು ಜತೆಯಾಗಿ ಆರೋಪಿಯ ಮನೆಗೆ ಹೋಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ನಿಜಕ್ಕೂ ಆತ ಗೊತ್ತಿದ್ದೇ ನಕ್ಸಲರು ಎಂದು ತಪ್ಪು ಮಾಹಿತಿ ನೀಡಿದ್ದಾನೆಯೇ, ಗೊತ್ತಿಲ್ಲದೆ ಮಾಡಿದ್ದಾನೆಯೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post