ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮತ್ತು ಎನ್ಸಿಪಿಯ ಮಹಾಯುತಿ ಮೈತ್ರಿಕೂಟಕ್ಕೆ ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿಣ್ ಯೋಜನೆಯೇ ಗೇಮ್ ಚೇಂಜರ್ ಆಗಿದೆ ಎಂಬುದು ಸಾಬೀತಾಗಿದೆ.
ಪ್ರತಿಪಕ್ಷಗಳು ಇದನ್ನು ಮಹಿಳೆಯರಿಗೆ ನೀಡಲಾಗುವ ‘ಲಂಚ’ ಎಂದು ಕರೆದರೂ, ಮಹಾಯುತಿ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯೋಜನೆಯನ್ನು ಉತ್ತೇಜಿಸಲು ವಿಶೇಷ ಪ್ರಯತ್ನಗಳನ್ನು ಮಾಡಿತು. 2.36 ಕೋಟಿ ಅರ್ಹ ಮಹಿಳಾ ಫಲಾನುಭವಿಗಳಿಗೆ ತಲಾ 7,500 ರೂ.ಗಳನ್ನು (ಜುಲೈನಿಂದ ನವೆಂಬರ್ ವರೆಗೆ ಐದು ತಿಂಗಳವರೆಗೆ ತಲಾ 1,500 ರೂ.) ಜಮೆ ಮಾಡಲಾಗಿತ್ತು. ಬಹುಶಃ ಇದೇ ಕಾರಣದಿಂದ ಮಹಿಳಾ ಮತದಾರರು ಮಹಾಯುತಿಯನ್ನು ವ್ಯಾಪಕವಾಗಿ ಬೆಂಬಲಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೈ ಹಿಡಿದ ಲಾಡ್ಕಿ ಬಹಿಣ್ ಯೋಜನೆ: ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಲಾಡ್ಕಿ ಬಹಿಣ್ ಯೋಜನೆ ಮಹಾಯುತಿಗೆ ಅದ್ಭುತ ಪ್ರಯೋಜನ ನೀಡಿದೆ. ಇದರ ಪರಿಣಾಮವಾಗಿ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ ಎಂದಿದ್ದಾರೆ. ಇನ್ನು ಈ ಯೋಜನೆಯನ್ನು ಸುಗಮವಾಗಿ ಜಾರಿಗೆ ತರುವಲ್ಲಿ ಎನ್ಸಿಪಿ ಸಚಿವೆ ಅದಿತಿ ತಟ್ಕರೆ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಅವರ ತಂಡವು ಅದ್ಭುತ ಕೆಲಸ ಮಾಡಿದೆ.
ಮಹಾಯುತಿಯ ಭರವಸೆಗೆ ಮಹಿಳಾ ಮತದಾರರು ಖುಷ್: ಒಟ್ಟು 9.70 ಕೋಟಿ ಮತದಾರರ ಪೈಕಿ 6.40 ಕೋಟಿ ಮತದಾರರು ನವೆಂಬರ್ನಲ್ಲಿ ಮತ ಚಲಾಯಿಸಿದ್ದಾರೆ. 6.40 ಕೋಟಿ ಮತದಾರರ ಪೈಕಿ 3.06 ಕೋಟಿ ಮಹಿಳೆಯರು ಮತ್ತು 3.34 ಕೋಟಿ ಪುರುಷರು. ಮಹಿಳೆಯರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಮಹಾಯುತಿಯ ಮಹಿಳಾ ಪರ ಅಭಿಯಾನದ ಯಶಸ್ಸಿಗೆ ಸಾಕ್ಷಿಯಾಗಿದೆ. ಮಾಸಿಕ ನೆರವನ್ನು 2,100 ರೂ.ಗೆ ಹೆಚ್ಚಿಸುವ ಮಹಾಯುತಿಯ ಭರವಸೆಗೆ ಮಹಿಳಾ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಿದರು. ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಸಿಕ ನೆರವನ್ನು ಹಂತ ಹಂತವಾಗಿ 3,000 ರೂ.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸರಣಿ ರ್ಯಾಲಿಗಳಲ್ಲಿ ಘೋಷಿಸಿದ್ದು ಗಮನಾರ್ಹ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಸೇರಿದಂತೆ ಮಹಾಯುತಿ ನಾಯಕರು ಮಹಾಯುತಿ ಸರ್ಕಾರ ಪ್ರಾರಂಭಿಸಿದ ಎಲ್ಲಾ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಮಹಾ ವಿಕಾಸ್ ಅಘಾಡಿ ಸ್ಥಗಿತಗೊಳಿಸಲಿದೆ ಎಂದು ನಂಬಿಸುವಲ್ಲಿ ಯಶಸ್ವಿಯಾದರು.
ಅಘಾಡಿ ಅಧಿಕಾರಕ್ಕೆ ಬಂದರೆ ಯೋಜನೆ ಸ್ಥಗಿತ ಎಂಬುದನ್ನು ನಂಬಿಸಿದ ಸಿಎಂ -ಡಿಸಿಎಂ: ಲಾಡ್ಕಿ ಬಹಿಣ್ ಯೋಜನೆ ಚುನಾವಣಾ ‘ಆಮಿಷ’ ಆಗಿದ್ದು, ಅದನ್ನು ಸ್ಥಗಿತಗೊಳಿಸಲಾಗುವುದು ಎಂಬ ಪ್ರತಿಪಕ್ಷಗಳ ಹೇಳಿಕೆಯನ್ನು ಸಿಎಂ ಶಿಂಧೆ ಮತ್ತು ಅವರ ಇಬ್ಬರು ಉಪಮುಖ್ಯಮಂತ್ರಿಗಳು ತಳ್ಳಿಹಾಕಿದರು. ಸಾಕಷ್ಟು ಅನುದಾನ ಹಂಚಿಕೆ ಮಾಡುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳು ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. 2004-25ನೇ ಸಾಲಿನಲ್ಲಿ ಲಾಡ್ಕಿ ಬಹಿಣ್ ಯೋಜನೆಗೆ 46,000 ಕೋಟಿ ರೂ. ಮೀಸಲಿಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post