ಮಂಗಳೂರು, ಡಿ.22: ಹೊಟೇಲ್, ರೆಸ್ಟೋರೆಂಟ್, ಕ್ಲಬ್, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೊಸ ವರ್ಷಾಚರಣೆಯನ್ನು ಆಚರಿಸುವಾಗ ಸರ್ಕಾರದ ಕೋವಿಡ್ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕೆಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿದ್ದಾರೆ.
ಹೊಸ ವರ್ಷದ ಆಚರಣೆಗಳಿಗೆ ಡಿಸೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಅಗತ್ಯ ಅನುಮತಿ ಪಡೆಯಬೇಕು. ಸರ್ಕಾರ ವಿಧಿಸಿರುವ ಎಲ್ಲ ರೀತಿಯ ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಹೊಸ ವರ್ಷದ ಕಾರ್ಯಕ್ರಮಗಳು ಡಿಸೆಂಬರ್ 31ರ ಮಧ್ಯರಾತ್ರಿಯೊಳಗೆ ಮುಕ್ತಾಯಗೊಳ್ಳಬೇಕು.
ಕಡಲತೀರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವವರು ಉತ್ತಮ ವಾತಾವರಣ ಕಾಪಾಡಿಕೊಳ್ಳಬೇಕು. ಅಶ್ಲೀಲ ನೃತ್ಯಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶಬ್ದ ಮಾಲಿನ್ಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾರ್ಟಿಗಳಿಗೆ ಡಿಜೆ ಸಂಗೀತ ಮಾಡುವಂತಿಲ್ಲ ಎಂದಿದ್ದಾರೆ.
18 ಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮದ್ಯ ಸೇವೆಯನ್ನು ನಿರ್ಬಂಧಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ಇಡಲು ಟ್ರಾಫಿಕ್ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಕ್ಷಿಪ್ರ ಕಾರ್ಯಾಚರಣೆ ಪಡೆ ನಗರದಲ್ಲಿ ಗಸ್ತು ತಿರುಗಲಿದೆ. ಸಂಭ್ರಮಾಚರಣೆ ನೆಪದಲ್ಲಿ ಬೈಕ್ ವೀಲೀಂಗ್, ಡ್ರ್ಯಾಗ್ ರೇಸಿಂಗ್, ಕಿರುಚಾಟ ಅಥವಾ ಅತಿವೇಗದಲ್ಲಿ ಚಾಲನೆ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Discussion about this post