ಮಂಗಳೂರು: ಮಂಗಳೂರು ಹೊರಹೊಲಯದ ಉಳಾಯಿಬೆಟ್ಟು ಪರಾರಿ ಎಂಬಲ್ಲಿನ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ ಉಳಾಯಿಬೆಟ್ಟು ಪರಾರಿ ಅಪ್ರಾಪ್ತೆ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಜಾಯ್ ಸಿಂಗ್ ಯಾನೆ ಜಾಯಿಬಾನ್, ಮುಖೇಶ್ ಸಿಂಗ್, ಮನೀಶ್ ತಿಕ್ರಿ, ಮುನೀಮ್ ಸಿಂಗ್ ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯ್ ಸಿಂಗ್ ಮತ್ತು ಮನೀಶ್ ತಿರ್ಕಿ ಈ ಹಿಂದೆಯೂ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಕಿರುಕುಳ ನೀಡುತ್ತಿದ್ದರು. ಭಾನುವಾರದ ದಿನ ಫ್ಯಾಕ್ಟರಿಯಲ್ಲಿ ಹೆಚ್ಚು ಮಂದಿ ಇರದಿರುವುದರಿಂದ ತಮ್ಮ ಕೊಠಡಿಗೆ ಬಾಲಕಿಯನ್ನು ಚಾಕಲೇಟ್ ನೀಡುವ ಆಮಿಷವೊಡ್ಡಿ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕೃತ್ಯ ನಡೆದ ಮುನ್ನಾ ದಿನ ಶನಿವಾರ ನಾಲ್ವರು ಕೂಡ ತಮ್ಮ ಕೊಠಡಿಯಲ್ಲಿ ಮದ್ಯಪಾನ ಮಾಡಿದ್ದು, ಬಾಲಕಿಯ ಬಗ್ಗೆ ಮಾತನಾಡಿಕೊಂಡಿದ್ದರು. ಪುತ್ತೂರಿನಿಂದ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಬಂದಿದ್ದ ಮುನೀಮ್ ಸಿಂಗ್, ಅವಕಾಶ ಸಿಕ್ಕರೆ ತನಗೂ ಒಂದು ಚಾನ್ಸ್ ಕೊಡಿ ಎಂದು ಹೇಳಿದ್ದ. ಅದಕ್ಕಾಗಿ ಭಾನುವಾರ ಬರುವಂತೆ ಹೇಳಿ, ಮೊದಲೇ ಬಾಲಕಿಯ ಅತ್ಯಾಚಾರಕ್ಕೆ ಪ್ಲಾನ್ ಮಾಡಿದ್ದರು.
ಜಾರ್ಖಂಡ್ ಮೂಲದ ದಂಪತಿ ಎರಡು ವರ್ಷಗಳಿಂದ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ನಾಲ್ಕು ಮಕ್ಕಳಿದ್ದು ಆಸುಪಾಸಿನಲ್ಲಿ ಆಟವಾಡುತ್ತಿದ್ದರು. ಎಂಟು ವರ್ಷದ ಹಿರಿಯ ಪುತ್ರಿಯೇ ಕೊಲೆಯಾದವಳು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಊಟ ಮಾಡಿ, ನಾಲ್ವರು ಕೂಡ ಆಟಕ್ಕೆ ತೆರಳಿದ್ದರು. ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದರಿಂದ ಟೈಲ್ಸ್ ಫ್ಯಾಕ್ಟರಿಯ ಸಂದು ಗೊಂದಿನಲ್ಲಿ ಅಡಗಿಕೊಂಡು ಆಡಲು ತೆರಳುತ್ತಿದ್ದರು. ಇಂಥ ಸಂದರ್ಭದಲ್ಲಿ ಬಾಲಕಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಜಯ್ ಸಿಂಗ್ ಮತ್ತು ಮನೀಶ್ ತಿರ್ಕಿ ಹಿಂದಿನ ರೀತಿಯಲ್ಲೇ ಪ್ಲಾನ್ ಮಾಡಿದ್ದು, ಭಾನುವಾರ ಮಧ್ಯಾಹ್ನ ಆಟವಾಡುತ್ತಿದ್ದ ಬಾಲಕಿಯನ್ನು ಹಿಡಿದು ಬಾಯಿಗೆ ಕೈಯಿಂದ ಮುಚ್ಚಿ ತಮ್ಮ ಕೊಠಡಿಗೆ ಹೊತ್ತೊಯ್ದಿದ್ದರು. ಆನಂತರ, ಒಬ್ಬರ ನಂತರ ಇನ್ನೊಬ್ಬನಂತೆ ಬಾಲಕಿಯನ್ನು ಬಲವಂತದಿಂದ ಕೂಡಿ ಹಾಕಿ, ಅತ್ಯಾಚಾರ ನಡೆಸಿದ್ದಾರೆ.