ಉಳ್ಳಾಲ, ನ.24: ಮಂಗಳೂರಿನ ಕಾಲೇಜೊಂದರಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬರು ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರದಲ್ಲಿ ನಡೆದಿದೆ. ಸೋಮೇಶ್ವರದ ರುದ್ರಬಂಡೆಯಿಂದ ವಿದ್ಯಾರ್ಥಿನಿ ಸಮುದ್ರಕ್ಕೆ ಹಾರಿದ್ದಾರೆ. ತಕ್ಷಣ ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಸಿಕ್ಕ ರಕ್ಷಣಾ ಸಾಮಗ್ರಿ ಬಳಸಿ ವಿದ್ಯಾರ್ಥಿನಿಯ ರಕ್ಷಣೆ ಮಾಡಿದ್ದಾರೆ.
ಇಂದು ಬೆಳಗ್ಗೆ ವಿದ್ಯಾರ್ಥಿನಿ ಸಮುದ್ರ ತೀರದ ರುದ್ರಪಾದೆಯಿಂದ ನೀರಿಗೆ ಜಿಗಿದಿದ್ದಾಳೆ. ರುದ್ರಪಾದೆಯಲ್ಲಿದ್ದ ಹೊರ ರಾಜ್ಯದ ವಲಸೆ ಕಾರ್ಮಿಕನೋರ್ವ ತಕ್ಷಣವೇ ನೀರಿಗೆ ಜಿಗಿದು ಯುವತಿಯನ್ನ ರಕ್ಷಿಸಿ ದಡದತ್ತ ಸೆಳೆಯಲು ಮುಂದಾಗಿದ್ದಾನೆ. ಆದರೆ ಯುವತಿ ಪ್ರಾಣ ಸಂಕಟದಿಂದ ವಲಸೆ ಕಾರ್ಮಿಕನನ್ನು ಗಟ್ಟಿಯಾಗಿ ಬಿಗಿದಪ್ಪಿದ್ದು, ಇಬ್ಬರೂ ನೀರುಪಾಲಾಗುವ ಅಪಾಯಕ್ಕೀಡಾಗಿದ್ದರು. ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಜೀವರಕ್ಷಕ ಸಿಬ್ಬಂದಿ ಸುಜಿತ್ ಟಯರ್ ಟ್ಯೂಬ್ ಮೂಲಕ ಯುವತಿ ಮತ್ತು ವಲಸೆ ಕಾರ್ಮಿಕನನ್ನ ದಡಕ್ಕೆ ಎಳೆದು ರಕ್ಷಿಸಿದ್ದಾರೆ. ಸ್ಥಳೀಯರು ಜೀವ ರಕ್ಷಕ ಸಿಬ್ಬಂದಿ ಸುಜಿತ್ ಗೆ ಸಹಕಾರ ನೀಡಿದ್ದಾರೆ.
ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Discover more from Coastal Times Kannada
Subscribe to get the latest posts sent to your email.
Discussion about this post