ಮಂಗಳೂರು, ಜ 25 : ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು ಎಂದು ಬೋಧಿಸಿದ ಶ್ರೀನಾರಾಯಣ ಗುರುಗಳ ಹೆಸರನ್ನು ಮುಂದಿಟ್ಟುಕೊಂಡು, ರಾಜಕೀಯ ಉದ್ದೇಶಕ್ಕಾಗಿ ಕೆಲವು ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿರುವುದು ವಿಷಾದನೀಯ ಎಂಬುದಾಗಿ ಬಿರುವೆರ್ ಕುಡ್ಲ ತಿಳಿಸಿದೆ.
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ವನ್ನು ನಿರಾಕರಣೆ ಹಿನ್ನೆಲೆಯಲ್ಲಿ ಮಾಡಲುದ್ದೇಶಿಸಿರುವ ಸ್ವಾಭಿಮಾನ ಜಾಥಾ ರಾಜಕೀಯ ರಹಿತವಾಗಿದ್ದರೆ ಮಾತ್ರ ಬೆಂಬಲ ನೀಡುವುದಾಗಿ ಬಿರುವೆರ್ ಕುಡ್ಲ ಸ್ಪಷ್ಟ ಪಡಿಸಿದೆ.
ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆ ಮುಖಂಡ ಲಕ್ಷ್ಮೀಶ್, ಬಿರುವೆರ್ ಕುಡ್ಲ ನಗರದ ವೃತ್ತಕ್ಕೆ ನಾರಾಯಣ ಗುರು ಹೆಸರಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಬೆಂಬಲ ನೀಡದವರು ಇಂದು ಜಾಥಾದಲ್ಲಿರುವುದು ರಾಜಕೀಯದ ಹುನ್ನಾರದಂತೆ ಭಾಸವಾಗುತ್ತಿದೆ ಎಂದರು.
ಶ್ರೀನಾರಾಯಣ ಗುರುಗಳು ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಿದವರು. ಶ್ರೀ ಗುರುಗಳು ಸಮಾಜಕ ಸುಧಾರಕರಾಗಿ ಸಮಾಜದ ತಾರತಮ್ಯಗಳನ್ನು ನಿವಾರಿಸುವ ಜೊತೆಗೆ ಸಮಾಜದಲ್ಲಿ ಧರ್ಮ, ಅಧ್ಯಾತ್ಮ ಜಾಗೃತಿಯನ್ನೂ ಮೂಡಿಸಿದ ಮಹಾತ್ಮರು. ಗಣರಾಜ್ಯೋತ್ಸವಕ್ಕಾಗಿ ಕೇರಳ ಸರಕಾರ ಕಳುಹಿಸಿದ ಇವರ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ ಎಂಬ ಆರೋಪದ ಮೂಲಕ ವಿವಾದ ಸೃಷ್ಟಿಸಿ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದ ಇರುವ ಪಕ್ಷಗಳು ಜನರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡಲೆತ್ನಿಸುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.
ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ರಾಜಪಥದಲ್ಲಿ ಸಾಗುವ ಟ್ಯಾಬ್ಲೆಗಳ ಆಯ್ಕೆಗಾಗಿ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ ಎಂದು ರಾಜ್ಯದ ಸಚಿವರು ಹೇಳಿದ್ದಾರೆ. ಯಾವ ಸೂತ್ರಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟ ಪಡಿಸಿದರೆ ಈ ಗೊಂದಲ ಬಗೆಹರಿಯಲಿದೆ ಎಂದು ಸಹನಾ ಕುಂದರ್ ಹೇಳಿದರು.
ಗಣರಾಜ್ಯೋತ್ಸವದಂದು ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರದ ಮೆರವಣಿಗೆಗೆ ನಮ್ಮೆಲ್ಲರ ಬೆಂಬಲವಿದೆ. ಈ ಮೂಲಕ ಶ್ರೀನಾರಾಯಣ ಗುರುಗಳ ಮೇಲೆ ಇಟ್ಟಿರುವ ಅಭಿಮಾನ, ಭಕ್ತಿ ಪ್ರಪಂಚಕ್ಕೆ ಮಾದರಿಯಾಗುವಂತೆ ಆಗಲಿ ಎಂಬುದಾಗಿ ನಮ್ಮ ಹಾರೈಕೆ ಎಂದು ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವಿದ್ಯಾ ರಾಕೇಶ್, ರಾಕೇಶ್ ಸಾಲ್ಯಾನ್, ಕಿಶೋರ್ ಬಾಬು, ಪ್ರಾಣೇಶ್ ಬಂಗೇರ, ಕಿರಣ್, ರಕ್ಷಿತ್ ಸುವರ್ಣ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post