ಮಂಗಳೂರು : ನಗರದ ಪದುವ ಶಾಲೆಯ ವಿದ್ಯಾರ್ಥಿನಿ, ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್ ಪಿರೇರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು.
ದೆಹಲಿಯಿಂದ ನೇರವಾಗಿ ಮಂಗಳೂರಿನ ಜಿಪಂ ಸಭಾಂಗಣದಲ್ಲಿ ಕುಳಿತಿದ್ದ 17 ವರ್ಷದ ಬಾಲ ಕಲಾವಿದೆ ರೆಮೋನಾ ಅವರನ್ನು ಪ್ರಧಾನಿ ಮೋದಿ ವರ್ಚುವಲ್ ಮೂಲಕ ಮಾತನಾಡಿಸಿದ್ದು, ಸಣ್ಣ ವಯಸ್ಸಿನಲ್ಲಿಯೇ ಅಪರಿಮಿತ ಸಾಧನೆ ಮಾಡಿರುವುದಕ್ಕಾಗಿ ಅಭಿನಂದಿಸಿದ್ದಾರೆ. ಕೂಚಿಪುಡಿ, ಕಥಕ್, ಸೆಮಿ ಕ್ಲಾಸಿಕಲ್, ಪಾಶ್ಚಾತ್ಯ, ಯಕ್ಷಗಾನ ಹೀಗೆ ನಾನಾ ರೀತಿಯ ನಾಟ್ಯ ಪ್ರಕಾರಗಳನ್ನು ಮಾಡುವ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಿಟ್ಟಿಸಿರುವ ರೆಮೋನಾ ಮುಂಬೈ, ಹೈದರಾಬಾದ್, ಬೆಂಗಳೂರು, ಪುಣೆ, ದೆಹಲಿ ಹೀಗೆ ದೇಶದ ಬಹುತೇಕ ನಗರಗಳಲ್ಲಿ ಸ್ಟೇಜ್ ಪ್ರೋಗ್ರಾಮ್ ನೀಡಿದ್ದಾರೆ. ತಮ್ಮ ಅಪೂರ್ವ ರೀತಿಯ ನಾಟ್ಯಗಳಿಂದಾಗಿ ಜನ ಮೆಚ್ಚುಗೆ ಪಡೆದಿದ್ದಾರೆ.

3 ವರ್ಷದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದಿರಾ ಅಥವಾ ಹೆತ್ತವರು ಕಾಳಜಿ ವಹಿಸಿದ್ದರೇ ಎಂಬ ಪ್ರಧಾನಿಯವರ ಪ್ರಶ್ನೆಗೆ ನನ್ನ ತಾಯಿಯವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ತುಂಬಾ ಆಸಕ್ತಿ ಇತ್ತು. ಹಾಗಾಗಿ ನಾನು ಇದರಲ್ಲಿ ಆಸಕ್ತಿ ಬೆಳೆಸಿಕೊಂಡೆ ಎಂದರು.
ಚಿಕ್ಕಂದಿನಿಂದಲೇ ಏನಾದರೂ ಕಠಿಣ ಪರಿಸ್ಥಿತಿ ಎದುರಾಗಿತ್ತೇ ಎಂಬ ಮೋದಿಯವರ ಪ್ರಶ್ನೆಗೆ ಉತ್ತರಿಸಿದ ರೆಮೋನಾ, ಚಿಕ್ಕಂದಿನಲ್ಲೇ ತಂದೆಯವರನ್ನು ಕಳೆದುಕೊಂಡೆ, ಹಾಗಾಗಿ ತಾಯಿಯವರು ಬಹಳ ಕಷ್ಟಪಟ್ಟರು. ಕಷ್ಟದಲ್ಲೇ ನನ್ನನ್ನು ಓದಿಸಿದ್ದರು, ನೃತ್ಯತರಬೇತಿಗೆ ಸೇರಿಸಿದ್ದರು ಎಂದರು. ಈ ಸಂದರ್ಭ ಮೋದಿಯವರು ರೆಮೋನಾ ತಾಯಿಗೂ ನಮಸ್ಕರಿಸಿದರು.
‘2022ರ ಸಾಲಿನ ರಾಷ್ಟ್ರೀಯ ಬಾಲಪುರಸ್ಕಾರ (ಕಲೆ ಮತ್ತು ಸಂಸ್ಕೃತಿ ವಿಭಾಗ)ಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ರೆಮೋನಾ. ಈಕೆ ಮಂಗಳೂರಿನ ಪದುವ ಪಿಯು ಕಾಲೇಜಿನ ವಿದ್ಯಾರ್ಥಿನಿ. 16 ರಾಜ್ಯಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಂಗಳೂರಿನ ನೃತ್ಯಗುರು ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆ. ಈ ಪ್ರಶಸ್ತಿಯು 1 ಲಕ್ಷ ರೂ. ಬಹುಮಾನವನ್ನೊಳಗೊಂಡಿದೆ’.

ನಾಟ್ಯ ಪ್ರಕಾರದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ತಾಯಿ ಗ್ಲಾಡಿಸ್ ಅವರು ಮಗಳಿಗೆ ಮೂರೂವರೆ ವಯಸ್ಸಿನಿಂದಲೇ ಭರತ ನಾಟ್ಯದ ಹೆಜ್ಜೆಗಳನ್ನು ಕಲಿಸಿಕೊಟ್ಟಿದ್ದರು. ಆಬಳಿಕ ಪ್ರಮೋದ್ ಕೋಡಿಕಲ್, ಪ್ರೀತೇಶ್ ಕುಮಾರ್, ನಿಕಿ ಪಿಂಟೋ, ಮನೋಜ್ ಕರಿಪಳ್ಳ, ಸಂಧ್ಯಾ ಕೆ. ಅವರಿಂದ ನಾಟ್ಯ ಪ್ರಕಾರಗಳನ್ನು ಕಲಿತಿದ್ದರು. ನಂತೂರಿನ ಪದುವಾ ಕಾಲೇಜಿನಲ್ಲಿ ಪಿಯು ಕಲಿಯುತ್ತಿರುವ ರೆಮೋನಾ ಮಂಗಳೂರಿನ ಫಳ್ನೀರ್ ನಿವಾಸಿಯಾಗಿದ್ದು, ಗ್ಲಾಡಿಸ್ ಸೆಲಿನ್ ಮತ್ತು ದಿ. ಎವರೆಸ್ಟ್ ಪಿರೇರಾ ದಂಪತಿಯ ಹಿರಿಯ ಪುತ್ರಿ. ಇನ್ನೊಬ್ಬ ಪುತ್ರ ರೊನಾಲ್ಡೋ ರಾಕ್ಸನ್ ಹೈಸ್ಕೂಲ್ ಓದುತ್ತಿದ್ದಾನೆ.