ಚೆನ್ನೈ, ಮಾರ್ಚ್ 25: ತಮಿಳುನಾಡು ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಪೋಲಿಸರಿಗೆ ತನಿಖೆಗಾಗಿ ಸೂಚಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಮದ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಿಂದಾಗಿ ಶಾಲಾ-ಕಾಲೇಜುಗಳು ದೇಶಾದ್ಯಾಂತ ಆರಂಭಗೊಂಡಿವೆ. ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರಿಗೆ ಸಮಯವಿಲ್ಲ. ಬೋಧಿಸುವ ಸಮಯವನ್ನು ವಿಸ್ತರಿಸಲು ಚಿಂತಿಸಲಾಗುತ್ತಿದೆ. ಹಗಲು ರಾತ್ರಿ ಕುಳಿತು ಓದಿದರೂ ಮುಗಿಯದ ಪಠ್ಯಕ್ರಮವಿದೆ. ಹೀಗಿರುವಾಗ ಶಾಲೆಗೆ ಹೋಗಿ ನೆಟ್ಟಗೆ ಶಿಕ್ಷಕರು ಬೋಧಿಸಿದ್ದನ್ನು ಕಲಿಯಬೇಕಾದ ವಿದ್ಯಾರ್ಥಿನಿಯರು ಮದ್ಯ ಸೇವನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಶಾಲಾ ಸಮವಸ್ತ್ರದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಧಿನಿಯರು ಎಣ್ಣೆ ಹೊಡೆದಿದ್ದಾರೆ. ಕೈಯಿಂದ ಕೈಯಿಗೆ ಬಾಟಲಿ ಕಸಿದುಕೊಂಡು ಪೈಪೋಟಿಗಿಳಿದು ಮದ್ಯ ಸೇವನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಕ್ಲಿಪ್ ಅನ್ನು ವಿದ್ಯಾರ್ಥಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಹುಡುಗಿಯರು ಮತ್ತು ಹುಡುಗರ ಗುಂಪು ಬಿಯರ್ ಬಾಟಲಿಯನ್ನು ತೆರೆದು ಸೇವಿಸುವುದನ್ನು ಸೆರೆ ಹಿಡಿಯಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಚೆಂಗಲ್ಪಟ್ಟುವಿನ ಸರ್ಕಾರಿ ಶಾಲೆಯವರು ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಇದು ಹಳೆಯ ವಿಡಿಯೋ ಎಂದು ಭಾವಿಸಲಾಗಿತ್ತು. ಆದರೆ ಮಂಗಳವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಕ್ಕಳ ಬಗ್ಗೆ ಪೋಷಕರಿಗೆ ಆತಂಕ ಹೆಚ್ಚಾಗಿದೆ.
ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದಲ್ಲಿ ತಿರುಕಳುಕುಂದ್ರಂನಿಂದ ತಾಚೂರ್‌ಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಘಟನೆಯನ್ನು ಅಧಿಕಾರಿಗಳು ಗಮನಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.