ಮಂಗಳೂರು, ಮಾ.24: ಅಪಚಿರಿತ ವ್ಯಕ್ತಿಯೊಬ್ಬ ವಾಟ್ಸ್ ಆಪ್ ನಲ್ಲಿ ಪಾರ್ಟ್ ಟೈಮ್ ಜಾಬ್ ಇರುವುದಾಗಿ ಹೇಳಿ ವಂಚಿಸಿದ್ದಲ್ಲದೆ, 1.15 ಲಕ್ಷ ರೂ. ಪೀಕಿಸಿ ಮೋಸಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ್ ಜಿಲ್ಲೆಯ ಬಾವುರಿಯ ಸದ್ದಾಂ ಗೌರಿ ಬಾವುರಿ (30) ಬಂಧಿತ ಆರೋಪಿ.
ರಾಜಸ್ಥಾನದ ಜೋಧ್ ಪುರ್ ಜಿಲ್ಲೆಯ ಬಾವುರಿಯಿಂದ ಆರೋಪಿಯನ್ನು ದಸ್ತಗಿರಿ ಮಾಡಿ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್, 8 ಡೆಬಿಟ್ ಕಾರ್ಡ್ ಗಳು, 4 ಬ್ಯಾಂಕ್ ಚೆಕ್ ಬುಕ್, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ. ಆರೋಪಿಯು ಸಂದೇಶ ಕಳುಹಿಸಿ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಈ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಸಂತ್ರಸ್ತ ವ್ಯಕ್ತಿಯನ್ನು ನಂಬಿಸಿ, ಆತನಿಂದ ಒಟ್ಟು 1.15 ಲಕ್ಷ ರೂ. ಹಣ ಪಡೆದು ವಂಚಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಅದರಂತೆ ಆರೋಪಿ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ ಅಗರವಾಲ್ ಹಾಗೂ ಡಿ.ಸಿ.ಪಿ ಸಿದ್ದಾರ್ಥ ಗೊಯಲ್ ಮಾರ್ಗದರ್ಶನದಲ್ಲಿ ಸಿಸಿಆರ್ ಬಿ ಘಟಕದ ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ಯಾಮಸುಂದರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
Discussion about this post