ಮಂಗಳೂರು: ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದು ಮೂವರ ಮೇಲೆ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿ. ಜಿ ಹಾಗೂ ಮೂವರು ಪೊಲೀಸರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಕಟೀಲು ಪರಿಸರದ ಶ್ರೀರಾಮ ಸೇನೆಯ ಕಾರ್ಯಕರ್ತರು ಎನ್ನಲಾದ ಮಹೇಶ್, ದುರ್ಗಾಚರಣ್ ಮತ್ತು ದೀಪಕ್ ಎಂಬ ಮೂವರು ಯುವಕರ ಮೇಲೆ ಬಜ್ಪೆ ಠಾಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಲಾಗಿತ್ತು. ಎ.22ರಂದು ಘಟನೆ ನಡೆದಿದ್ದು, ಈ ಮೂವರಲ್ಲಿ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬ ಯುವಕ ಕಟೀಲಿನ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಗೆ ಠಾಣೆಯಲ್ಲಿ ಕೂಡಿಹಾಕಿ ಗಂಭೀರ ಹಲ್ಲೆ ನಡೆಸಲಾಗಿದೆ ಎಂದು ಮೇಲಧಿಕಾರಿಗಳಿಗೆ ದೂರು ನೀಡಿದ್ದರಿಂದ ಉತ್ತರ ವಿಭಾಗದ ಎಸಿಪಿ ಮಹೇಶ್ ಕುಮಾರ್ ತನಿಖೆ ನಡೆಸಿ ವರದಿ ನೀಡಿದ್ದರು. ಅದನ್ನು ಆಧರಿಸಿ, ಇನ್ಸ್ ಪೆಕ್ಟರ್ ಸೇರಿ ನಾಲ್ವರನ್ನು ಇಲಾಖಾ ತನಿಖೆ ಬಾಕಿಯಿರಿಸಿ ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಡಿಸಿಪಿ ಹರಿರಾಮ್ ಶಂಕರ್ ಅವರಿಗೆ ಹೊಣೆ ವಹಿಸಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಕಟೀಲು ದೇಗುಲ ಪರಿಸರದಲ್ಲಿ ಮೂಡುಬಿದ್ರೆ ಮೂಲದ ಮುಸ್ಲಿಂ ವ್ಯಕ್ತಿ ಸೀಯಾಳ ಹಾಕಲು ಟೆಂಪೋದಲ್ಲಿ ಬಂದಿದ್ದಾಗ, ಹಿಂದು ಸಂಘಟನೆಯ ಇಬ್ಬರು ಯುವಕರು ಅಡ್ಡಹಾಕಿದ್ದರು ಎನ್ನಲಾಗಿದೆ. ಇಲ್ಲಿ ನೀವು ಸೀಯಾಳ ಹಾಕಲು ಅವಕಾಶ ಇಲ್ಲ ಎಂದು ಹೇಳಿ ವ್ಯಾಪಾರಿಯನ್ನು ಮರಳಿ ಕಳಿಸಿದ ಘಟನೆ ನಸುಕಿನ ಜಾವ ನಡೆದಿತ್ತು. ಈ ಬಗ್ಗೆ ಸೀಯಾಳ ವ್ಯಾಪಾರಿ ಬಜ್ಪೆ ಇನ್ಸ್ ಪೆಕ್ಟರ್ ಸಂದೇಶ್ ಅವರಿಗೆ ದೂರು ನೀಡಿದ್ದರು. ಘಟನೆ ಬಗ್ಗೆ ವಿಚಾರಣೆ ನಡೆಸಲು ಎಪ್ರಿಲ್ 22ರಂದು ಇಬ್ಬರು ಯುವಕರನ್ನು ಠಾಣೆಗೆ ಕರೆತಂದಿದ್ದು, ಈ ವೇಳೆ ಎದುರುತ್ತರ ನೀಡಿದ್ದಾರೆಂದು ಪೊಲೀಸರು ಲಾಠಿಯಲ್ಲಿ ಹೊಡೆದಿದ್ದಾರೆ. ಇದನ್ನು ಕೇಳಲು ಬಂದ ಸ್ಥಳೀಯ ಮಹೇಶ್ ಎಂಬವರ ಮೇಲೂ ಪೊಲೀಸರು ದೈಹಿಕ ಹಲ್ಲೆ ನಡೆಸಿದ್ದರು. ಲಾಠಿ ಏಟಿನಿಂದಾಗಿ ನಡೆಯಲು ಸಾಧ್ಯವಾಗದೆ, ಒಬ್ಬನಿಗೆ ಮೂತ್ರ ಮಾಡುವುದಕ್ಕೂ ಕಷ್ಟ ಆಗಿರುವುದರಿಂದ ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರು ಎ.24ರಂದು ಬಜ್ಪೆ ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೂ ತರಲಾಗಿತ್ತು.
ಈ ಹಿನ್ನೆಲೆಯಲ್ಲಿ ಉಳಿದ ಇಲಾಖಾ ಶಿಸ್ತುಕ್ರಮ ಹಾಗೂ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿ. ಜಿ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.