ಮಂಗಳೂರು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮಾಂಗಲ್ಯ ಸರ ಹರಿದು, ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಮತ್ತು ಆ ಸರವನ್ನು ಖರೀದಿಸಿದ್ದ ಜುವೆಲ್ಲರಿಯ ಮಾಲೀಕರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಾಮಂಜೂರಿನ ಆರೀಫ್ (26) ಮತ್ತು ಕಾವೂರಿನ ಮುಹಮ್ಮದ್ ಹನೀಫ್ (36) ಎಂದು ಗುರುತಿಸಲಾಗಿದೆ. ಇವರ ಬಳಿಯಿಂದ ಚಿನ್ನಾಭರಣವನ್ನು ಖರೀದಿಸಿದ್ದ ಅಬ್ದುಲ್ ಸಮದ್ ಪಿಪಿ ಮತ್ತು ಮುಹಮ್ಮದ್ ರಿಯಾಝ್ ಎಂಬಿಬ್ಬರು ಜುವೆಲ್ಲರಿ ಅಂಗಡಿಯ ಮಾಲಕರನ್ನೂ ಬಂಧಿಸಲಾಗಿದೆ.
ಏ.12ರಂದು ಸಂಜೆ ನೀರುಮಾರ್ಗದ ಪಾಲ್ದನೆ ಎಂಬಲ್ಲಿ ಮಮತಾ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಆರೀಫ್ ಮತ್ತು ಹನೀಫ್, ದಾರಿ ಕೇಳುವ ನೆಪದಲ್ಲಿ ಮಮತಾ ಕುತ್ತಿಗೆಯಲ್ಲಿದ್ದ 8 ಗ್ರಾಂ ತೂಕದ ಮಾಂಗಲ್ಯದ ಸರವನ್ನು ಎಗರಿಸಿದ್ದರು. ಅದಕ್ಕೂ ಮೊದಲು ಆರೋಪಿ ಹನೀಫ್ ಕೆಲರಾಯ್ ಬಳಿ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದು, ಈ ವಾಹನ ಬಳಸಿ ಬೊಲ್ಪುಗುಡ್ಡೆಯ ವತ್ಸಲಾ ಎಂಬುವರು ನಡೆದುಕೊಂಡು ಹೋಗುತ್ತಿದ್ದಾಗ, ದಾರಿ ಕೇಳುವ ನೆಪದಲ್ಲಿ ಅವರ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ. ಇವೆರಡು ಸರಗಳನ್ನು ಕಾವೂರಿನ ನಕ್ಷತ್ರ ಜುವೆಲ್ಲರಿ ಶಾಪ್ ಮಾಲೀಕರಾದ ಅಬ್ದುಲ್ ಸಮದ್ ಮತ್ತು ಮುಹಮ್ಮದ್ ರಿಯಾಝ್ ಖರೀದಿಸಿದ್ದರು.
ಆರೋಪಿಗಳಿಂದ ₹ 80 ಸಾವಿರ ಮೌಲ್ಯದ 18 ಗ್ರಾಂ ಚಿನ್ನದ ಆಭರಣ ಮತ್ತು ₹ 50 ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post