ಚಾಮರಾಜನಗರ: ಕೆಲವು ಪ್ರೇಮಿಗಳು ಅಕ್ಕಪಕ್ಕ ಯಾರಿರುತ್ತಾರೆ ಎಂಬುವುದನ್ನು ಗಮನಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಆಗಾಗ ಹುಚ್ಚಾಟ ಮರೆಯುವುದನ್ನು ನೋಡಿರುತ್ತೇವೆ. ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ಜಗವೆಲ್ಲಾ ಕುರುಡಾಗಿರುತ್ತದೆ. ಸದ್ಯ ಪ್ರೇಮಿಗಳಿಬ್ಬರು ಹಾಡಹಗಲೇ ರಸ್ತೆಯಲ್ಲಿ ಬೈಕ್ ಮೇಲೆ ಕುಳಿತು ರೋಮ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ
ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ನಡುರಸ್ತೆಯಲ್ಲಿ ಬೈಕ್ ಮೇಲೆ ರೈಡ್ ಹೋಗುತ್ತಾ, ಸಾರ್ವಜನಿಕವಾಗಿ ಲಿಪ್‍ಲಾಕ್ ಮಾಡಿದ್ದಾರೆ. ಪಲ್ಸರ್ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಉಲ್ಟಾ ಕುಳಿತ ಯುವತಿ ತನ್ನ ಪ್ರಿಯಕರನನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾಳೆ. ಜನರು, ಬಸ್ಸು, ಲಾರಿಗಳ ಸಂಚಾರದ ಪರಿವೇ ಇಲ್ಲದೇ ಹೆದ್ದಾರಿಯಲ್ಲಿ ಪ್ರೇಮಿಗಳು ಹುಚ್ಚಾಟ ನಡೆಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಬೈಕ್ ಚಾಮರಾಜನಗರದ್ದಲ್ಲಿಯೇ ನೋಂದಣಿಯಾಗಿದ್ದು ಕೆಲ ಸವಾರರು ಇಬರಿಬ್ಬರ ಆಟವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ದೃಶ್ಯ ಕೆಲವರಿಗೆ ಮುಜುಗರವನ್ನುಂಟು ಮಾಡಿದೆ.
ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಬೈಕ್ ಸವಾರನ ವಿರುದ್ಧ ಚಾಮರಾಜನಗರ ಸಂಚಾರ ಠಾಣೆಯ ಪೊಲೀಸರು ಸಂಚಾರ ನಿಯಮ ಕಾನೂನು ಉಲ್ಲಂಘನೆ ಅಡಿಯಲ್ಲಿ ಸ್ವಪ್ರೇರಿತ ದೂರು ತಯಾರಿಸಿ ಮೊ.ನಂ: 39/2022 ಕಲಂ 279 IPC ಮತ್ತು 184 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.