ಮಂಗಳೂರು: ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಮಸೀದಿಗೆ ಸಂಬಂಧಿಸಿದಂತೆ ಗೊಂದಲ ಮೂಡಿರುವುದರಿಂದ ಯಥಾಸ್ಥಿತಿ ಕಾಪಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದೆ. ಈ ಬಗ್ಗೆ ತಹಶೀಲ್ದಾರ್ ಅವರು ದರ್ಗಾದ ಆಡಳಿತ ಕಮಿಟಿ ಹಾಗೂ ಎರಡೂ ಗುಂಪುಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೆ ದರ್ಗಾದ ದಾಖಲೆಗಳ ಮೂಲಕ ಪರಿಶೀಲನೆ ನಡೆಸಿ ಪ್ರಕರಣ ಇತ್ಯರ್ಥಗೊಳಿಸುವುದಾಗಿ ಹೇಳಿದ್ದಾರೆ ಎಂದರು. ಆ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಸಮುದಾಯದವರು ಬಹಳಷ್ಟು ಅನ್ಯೋನ್ಯವಾಗಿದ್ದಾರೆ. ಆದ್ದರಿಂದ ಎರಡೂ ಸಮುದಾಯದವರು ಜಿಲ್ಲಾಡಳಿತ ಈ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಾರ್ವಜನಿಕರು ಹೇಳಿದ್ದಾರೆ. ವಾರಗಳ ಕಾಲ ದರ್ಗಾ ನವೀಕರಣ ಕಾರ್ಯವನ್ನು ತಹಶೀಲ್ದಾರ್ ಸ್ಥಗಿತಗೊಳಿಸಲು ಸೂಚಿಸಿದ್ದಾರೆ ಎಂದು ಅವರು ಹೇಳಿದರು.
‘ಹಳೆಯ ಕಟ್ಟಡ ಕೆಡವಿದಾಗ ಮರದ ರಚನೆ ಕಂಡುಬಂದಿದೆ. ನೋಡಲು ದೇವಸ್ಥಾನದಂತಿದೆ ಎಂದು ಕೆಲವರು ಮಸೀದಿ ಮುಖ್ಯಸ್ಥರ ಜತೆ ಚರ್ಚಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ದಾಖಲೆ ಪರಿಶೀಲಿಸಿ ಸೌಹಾರ್ದವಾಗಿ ಪ್ರಕರಣ ಬಗೆಹರಿಸುವುದಾಗಿ ಹೇಳಿದ್ದಾರೆ’ ಎಂದರು.
ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ತಹಶೀಲ್ದಾರ :
ಜಾಗದ ದಾಖಲೆ ಹಾಗೂ ಇತಿಹಾಸದ ಬಗ್ಗೆ ಮಾಹಿತಿ ಕಲೆ ಹಾಕಲು ತಹಶೀಲ್ದಾರ ಪುರಂದರ ಮುಂದಾಗಿದ್ದು, ಸದ್ಯ ದರ್ಗಾದ ನವೀಕರಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ ಸೂಚನೆ ನೀಡಿದ್ದಾರೆ. ಕೆಲಸ ಸ್ಥಗಿತಗೊಳಿಸಿ ಜಿಲ್ಲಾಡಳಿತದ ನಡೆಗೆ ಸಮ್ಮತಿ ಸೂಚಿಸಿದ ದರ್ಗಾ ಆಡಳಿತ ಒಂದು ವಾರ ಕೆಲಸ ಸ್ಥಗಿತಕ್ಕೆ ಸಮ್ಮತಿ ಸೂಚಿಸಿದೆ.
“ಸುಮಾರು 800 ವರ್ಷದ ಹಿಂದಿನ ಮಳಲಿ ಮಸೀದಿ ಇದಾಗಿದ್ದು, ದೇವಸ್ಥಾನ ಶೈಲಿಯ ಕಟ್ಟಡದಲ್ಲಿ ಸದ್ಯ ಮೌಲ್ವಿಗಳ ವಿಶ್ರಾಂತಿ ಸ್ಥಳವಾಗಿದೆ. ಮೌಲ್ವಿ, ಉಲೇಮಾಗಳು ಕುಳಿತುಕೊಳ್ಳುವ ಸ್ಥಳವೂ ಆಗಿದ್ದು, ಹಿಂದಿನ ಮೌಲ್ವಿಗಳು ಈ ಸ್ಥಳದಲ್ಲೇ ನಮಾಜ್ ಮಾಡುತ್ತಿದ್ದರು. ಹೀಗಾಗಿ ಈ ಕಟ್ಟಡವನ್ನು ಕೆಡವದೇ ಹಾಗೆಯೇ ಉಳಿಸಿಕೊಂಡಿದ್ದೇವೆ. ಮಸೀದಿಗೆ ಸಂಬಂಧಿಸಿದ ಎಲ್ಲಾ ದಾಖಲೆ ಇದೆ”.
ಹಲವು ಭಾಗಗಳಲ್ಲಿ ದೇವಸ್ಥಾನ ಶೈಲಿಯ ಮಸೀದಿ :
“ನಮಗೆ ಇಲ್ಲಿ ನಮಾಜ್ ಮಾಡುವ ಪರಿಸ್ಥಿತಿ ಇಲ್ಲ. ಮಳೆಗೆ ತೊಂದರೆಯಾಗುವ ಹಿನ್ನಲೆ ಇದ್ದ ಮಸೀದಿಯ ಒಂದು ಪಾರ್ಶ್ವವನ್ನು ಕೆಡವಿದ್ದೇವೆ. ದೇವಸ್ಥಾನ ಶೈಲಿಯ ಮಸೀದಿ ಹಲವು ಭಾಗಗಳಲ್ಲಿ ಇದೆ,” ಅಂತಾ ಮಸೀದಿ ಒಳಭಾಗದಲ್ಲಿ ದೇವಸ್ಥಾನ ಶೈಲಿಯ ಕಟ್ಟಡದ ಬಗ್ಗೆ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸಂಶಯವಿದೆ: ‘ಇಲ್ಲಿ ಯಾವುದೋ ಕಾಲದಲ್ಲಿ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಿಸಿರಬಹುದು ಎನ್ನುವ ಸಂದೇಹ ನಮಗಿದೆ’ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ. ‘ಪುರಾತತ್ವ ಇಲಾಖೆಯ ಮೂಲಕ ಇಲ್ಲಿ ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸಬೇಕು. ಮಸೀದಿ ಇದ್ದದ್ದೇ ನಿಜವಾಗಿದ್ದರೆ, ನವೀಕರಣ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಧ್ಯಂತರ ತಡೆಯಾಜ್ಞೆ : ಮಳಲಿ ಮಸೀದಿಯಲ್ಲಿ ನವೀಕರಣ ಕಾಮಗಾರಿಗೆ ಇಲ್ಲಿನ ಮೂರನೇ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಗಂಜಿಮಠ ನಿವಾಸಿ ಧನಂಜಯ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಕಾಮಗಾರಿ ನಡೆಸದಂತೆ ಮತ್ತು ದೇವಸ್ಥಾನವನ್ನು ಹೋಲುವ ಕಟ್ಟಡದ ಭಾಗಕ್ಕೆ ಹಾನಿ ಉಂಟುಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯವರೆಗೆ ಕಟ್ಟಡದ ಒಳಗೆ ಮಸೀದಿ ಕಮಿಟಿಯವರಿಗೆ, ಅನುಯಾಯಿಗಳಿಗೆ ಪ್ರವೇಶ ನಿಷೇಧಿಸಿದೆ.
ಶರಣ್‌ಗೆ ಏನು ಕೆಲಸ?: ಮುನೀರ್ ಕಾಟಿಪಳ್ಳ : ‘ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಆವರಣಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ಗಲಾಟೆ ಎಬ್ಬಿಸುವ ಶರಣ್ ಪಂಪ್‌ವೆಲ್‌ಗೆ ಮಸೀದಿಯ ಒಳಗೆ ಏನು ಕೆಲಸ’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ. ‘ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಸೌಹಾರ್ದಕ್ಕೆ ಧಕ್ಕೆ ತರುವ ರೀತಿ ವರ್ತಿಸಿದ ಶರಣ್ ಪಂಪ್‌ವೆಲ್ ಮತ್ತು ಅವರ ತಂಡದ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕಿತ್ತು. ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಕಾನೂನುಭಂಜಕರ ಮುಂದೆ ತಲೆ ತಗ್ಗಿಸುವುದು, ರಾಜಕೀಯ ಬಲವುಳ್ಳ, ಬಹುಸಂಖ್ಯಾತ ಮತೀಯವಾದದ ಎದುರು ಮೌನಕ್ಕೆ ಶರಣಾಗುವುದು ಖಂಡನೀಯ’ ಎಂದಿದ್ದಾರೆ.