ಮಂಗಳೂರು, ಎಪ್ರಿಲ್ 25: ದೈವಸ್ಥಾನದ ಭಂಡಾರ ಮೆರವಣಿಗೆ ಒಯ್ಯುತ್ತಿದ್ದಾಗ ಕಲ್ಲಿನ ಸೇತುವೆಯೊಂದು ಮುರಿದು ಬಿದ್ದು ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರ ಗಾಯಗೊಂಡ ಘಟನೆ ಮೂಡುಬಿದ್ರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಎಂಬಲ್ಲಿ ನಡೆದಿದೆ.
ಪಡ್ಯಾರಬೆಟ್ಟು ಕಾರಣಿಕದ ಕೊಡಮಣಿತ್ತಾಯ ಕ್ಷೇತ್ರದ ಮುಕ್ಕಾಲ್ದಿ ಸುನಿಲ್ ಶೆಟ್ಟಿ, ಲೋಕೇಶ್ ಭಂಡಾರಿ ಸೇರಿದಂತೆ ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ಸೊಂಟ, ಕೈಕಾಲುಗಳಿಗೆ ತೀವ್ರ ಗಾಯಗೊಂಡಿದ್ದಾರೆ. ತಾಕೋಡೆಯಲ್ಲಿ ಕುಟುಂಬವೊಂದರ ಕೊಡಮಣಿತ್ತಾಯ ಮತ್ತು ಇನ್ನಿತರ ದೈವಗಳಿಗೆ ಧರ್ಮ ನೇಮಕ್ಕೆ ತಯಾರಿ ನಡೆದಿತ್ತು. ಹೀಗಾಗಿ ಪಡ್ಯಾರಬೆಟ್ಟು ದೇವಸ್ಥಾನದ ಪ್ರತಿನಿಧಿ ಸುನಿಲ್ ಶೆಟ್ಟಿ ನೇತೃತ್ವದಲ್ಲಿ ಪುಚ್ಚೆಮೊಗರಿನ ಭಂಡಾರ ಮನೆಯಿಂದ ದೈವದ ಆಭರಣಗಳನ್ನು ತರುತ್ತಿದ್ದರು.
ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆಯಲ್ಲಿ ಬರುತ್ತಿದ್ದಾಗ ಬಾವದಬೈಲಿನ ಹಳೆ ಕಾಲದ ಕಲ್ಲಿನ ಸೇತುವೆ ಏಕಾಏಕಿ ಮುರಿದು ಬಿದ್ದಿದೆ. ಪಲ್ಲಕ್ಕಿಯಲ್ಲಿದ್ದ ಆಭರಣ ಸಮೇತ ಉರುಳಿ ಬಿದ್ದಿದ್ದು ಪರಿಣಾಮ ಅದನ್ನು ಹೊತ್ತುಕೊಂಡಿದ್ದವರು ಹತ್ತಡಿ ಆಳದ ತೋಡಿಗೆ ಬಿದ್ದು ಗಾಯಗೊಂಡಿದ್ದಾರೆ.



ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತಿತ್ತು. ಎದುರಿನಲ್ಲಿ ವಿಡಿಯೋ ಮಾಡುತ್ತಿದ್ದವರು, ಬ್ಯಾಂಡ್ ವಾದ್ಯಗಳ ಸೆಟ್ ನವರು ಇದ್ದರು. ಅದರ ಹಿಂದೆ, ದೀಟಿಗೆ ಹಿಡಿದುಕೊಂಡವರು ಇದ್ದರು. ದೀಟಿಗೆ ಹಿಡಿದವರು ಸೇತುವೆ ಪಾಸ್ ಆಗಿದ್ದು ತಿರುಗಿ ನೋಡುತ್ತಿದ್ದಂತೆ ಹಿಂದೆ ಪಲ್ಲಕ್ಕಿಯಲ್ಲಿ ಹೊತ್ತು ಬರುತ್ತಿದ್ದವರು ಸೇತುವೆ ಸಮೇತ ಕುಸಿದು ಬಿದ್ದಿದ್ದಾರೆ. ಕುಸಿದು ಬೀಳುವ ದೃಶ್ಯ ಮುಂದಿದ್ದ ಕ್ಯಾಮರಾದಲ್ಲಿ ಸೆರೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ.
ಸೇತುವೆ ಮುರಿದು ಬಿದ್ದಿರುವುದನ್ನು ನೋಡಿದರೆ ಅದಕ್ಕೆ ಬೀಮ್ ಹಾಕಿರುವಂತೆ ಕಾಣುತ್ತಿಲ್ಲ. ಅಡಿ ಭಾಗಕ್ಕೆ ಕಾಂಕ್ರೀಟ್ ಬೀಮ್ ಹಾಕದೆ ಕಲ್ಲಿನಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿರುವಂತೆ ತೋರುತ್ತಿದೆ. ಪಲ್ಲಕ್ಕಿ ಹೊತ್ತವರು ಮತ್ತು ಇತರರು ಒಮ್ಮೆಗೇ ನಡಧುಹೋಗಿದ್ದರಿಂದ ಅದರ ಭಾರಕ್ಕೆ ಕುಸಿದು ಬಿದ್ದಿದೆ. ಬೇಸಗೆ ಆಗಿದ್ದರಿಂದ ತೋಡಿನಲ್ಲಿ ನೀರಿಲ್ಲದೆ ಅಡಿಭಾಗದಲ್ಲಿದ್ದ ಕಲ್ಲು ತಾಗಿ ಜೋರು ಪೆಟ್ಟು ಬಿದ್ದಿದೆ. ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪರಿಕರಗಳಿಗೆ ಹಾನಿಯಾಗಿದೆ. ದುರ್ಘಟನೆ ಹಿನ್ನೆಲೆಯಲ್ಲಿ ತಾಕೋಡೆಯ ಧರ್ಮನೇಮ ಸ್ಥಗಿತಗೊಂಡಿದೆ.
Discover more from Coastal Times Kannada
Subscribe to get the latest posts sent to your email.







Discussion about this post