ಲಂಡನ್ : 18ನೇ ಶತಮಾನದ ಮೈಸೂರಿನ ದೊರೆ ಟಿಪ್ಪು ಸುಲ್ತಾನ್‌ನ ಖಡ್ಗವನ್ನು ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 14 ಮಿಲಿಯನ್ ಪೌಂಡ್‌ಗಳಿಗೆ ($ 17.4 ಮಿಲಿಯನ್ ಅಥವಾ ರೂ. 140 ಕೋಟಿ) ಮಾರಾಟ ಮಾಡಲಾಗಿದೆ.ಮಂಗಳವಾರದ ಬೆಲೆ ಅಂದಾಜಿನ ಏಳು ಪಟ್ಟು ಹೆಚ್ಚಾಗಿದೆ ಎಂದು ಹರಾಜಿನ ಸಂಸ್ಥೆ ಬೊನ್‌ಹಾಮ್ಸ್ ಹೇಳಿದೆ.
“ಟಿಪ್ಪು ಸುಲ್ತಾನ್ ಬಳಸಿದ ಎಲ್ಲ ಶಸ್ತ್ರಾಸ್ತ್ರಗಳಲ್ಲಿ ಈ ಖಡ್ಗವು ಅದ್ಭುತವಾಗಿದೆ. ವಿಶೇಷವಾಗಿ ಖಡ್ಗವನ್ನು ತಯಾರಿಸಲಾಗಿದ್ದು, ಅದ್ಭುತ ಕಲೆಗೆ, ಕರಕುಶಲತೆಗೆ ಸಾಕ್ಷಿಯಾಗಿದೆ. ಹಾಗಾಗಿ, ನಿಗದಿಪಡಿಸಿದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಬೆಲೆಗೆ ಹರಾಜಾಗಿದೆ. ಇದು ಟಿಪ್ಪುವಿನ ವಿಶೇಷ ಖಡ್ಗಳಲ್ಲಿ ಒಂದು” ಎಂದು ಬೊನ್ಹಾಮ್ಸ್ ಬೊನ್ಹಾಮ್ಸ್ ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಆರ್ಟ್ ಮುಖ್ಯಸ್ಥ ಆಲಿವರ್ ವೈಟ್ ಮಾಹಿತಿ ನೀಡಿದ್ದಾರೆ.
ಮೈಸೂರಿನ ಹುಲಿ ಎಂದೇ ಬಿರುದಾಂಕಿತನಾಗಿದ್ದ ಟಿಪ್ಪು ಸುಲ್ತಾನನು ಹತ್ಯೆಗೀಡಾದ ಬಳಿಕ ಆತನ ಶೌರ್ಯದ ಪ್ರತೀಕವಾಗಿ ಖಡ್ಗವನ್ನು ಬ್ರಿಟಿಷ್ ಮೇಜರ್ ಜನರಲ್ ಡೇವಿಡ್ ಬೇರ್ಡ್ ಅವರಿಗೆ ನೀಡಲಾಗಿತ್ತು. ಇದೇ ಖಡ್ಗವನ್ನು ಈಗ ಹರಾಜು ಹಾಕಲಾಗಿದೆ. ಇದು ಟಿಪ್ಪು ಸುಲ್ತಾನನ ಅರಮನೆಯಲ್ಲಿ ಸಿಕ್ಕಿತ್ತು.
“ಜರ್ಮನಿ ಬ್ಲೇಡ್ ವಿನ್ಯಾಸದ ರೀತಿ ಮೊಘಲ್ ಖಡ್ಗ ತಯಾರಿಕರು ಇದನ್ನು ತಯಾರಿಸಿದ್ದಾರೆ. ಹರಾಜು ಹಾಕಲಾದ ಖಡ್ಗವನ್ನು 16ನೇ ಶತಮಾನದಲ್ಲಿ ಭಾರತಕ್ಕೆ ತರಲಾಗಿತ್ತು. ವಜ್ರದ ತುದಿಯಲ್ಲಿ ಚಿನ್ನದ ಅಕ್ಷರಗಳಿವೆ. ಇದು ಈಗಲೂ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದೆ. ಇದನ್ನು ಖರೀದಿಸಲು ಇಬ್ಬರ ಮಧ್ಯೆ ಭಾರಿ ಪೈಪೋಟಿ ಶುರುವಾಗಿತ್ತು. ಕೊನೆಗೂ ಒಬ್ಬರು ಉತ್ಕೃಷ್ಟ ಗುಣಮಟ್ಟದ ಖಡ್ಗವನ್ನು ಖರೀದಿಸಿದ್ದಾರೆ” ಎಂದು ಆಲಿವರ್ ವೈಟ್ ತಿಳಿಸಿದ್ದಾರೆ.