ಮಂಗಳೂರು, ಜುಲೈ 25: ಡ್ರಗ್ಸ್ ವ್ಯಸನಕ್ಕೆ ಬಿದ್ದ ಯುವಕನೊಬ್ಬ ಹಣ ಕೊಡಲಿಲ್ಲ ಎಂಬ ನೆಪದಲ್ಲಿ ತನ್ನ ಅಜ್ಜ, ಅಜ್ಜಿಯನ್ನೇ ಕುತ್ತಿಗೆ ಸೀಳಿ ಕೊಲೆಗೈದಿದ್ದಲ್ಲದೆ, ಚಿನ್ನಾಭರಣ ದೋಚಿಕೊಂಡು ಮಂಗಳೂರಿನ ಜುವೆಲ್ಲರಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕಿಬಿದ್ದಿದ್ದಾನೆ.
ಕೇರಳದ ತೃಶ್ಶೂರು ಜಿಲ್ಲೆಯ ವೈಲತ್ತೂರಿನ ನಾಯರಂಗಾಡಿ ಗ್ರಾಮದಲ್ಲಿ ಜುಲೈ 23ರ ಭಾನುವಾರ ಬೆಳಗ್ಗೆ ಅಬ್ದುಲ್ಲ(75) ಮತ್ತು ಜಮೀಳಾ(64) ಎಂಬ ವೃದ್ಧ ದಂಪತಿಯ ಕೊಲೆಯಾಗಿತ್ತು. ಅವರ ಮನೆಯಲ್ಲೇ ವಾಸವಿದ್ದ ಮೊಮ್ಮಗ ಅಹ್ಮದ್ ಅಕ್ಮಲ್ ಈ ಕೃತ್ಯ ಎಸಗಿದ್ದಾನೆಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದರು.
ಆರೋಪಿಯಿಂದ ಮುತ್ತು ಪೋಣಿಸಿದ ಎರಡು ಎಳೆಯ ಚಿನ್ನದ ಸರ, ಸಣ್ಣ ಪದಕವಿರುವ ಚಿನ್ನದ ಸರ, ಮೂರು ಕಿವಿಯೋಲೆಗಳು, ಐದು ಉಂಗುರಗಳು, ಎರಡು ಬಳೆಗಳು, ಪಾಸ್‌ಪೋರ್ಟ್ ಹಾಗೂ ಇತರ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಕೇರಳದ ತ್ರಿಶೂರ್ ಜಿಲ್ಲೆಯ ವೈಲತ್ತೂರು ಪನಾಂಗೈಲ್ ಹೌಸ್‌ನ ನಿವಾಸಿ ಅಹಮ್ಮದ್ ಅಕ್ಬಲ್ (27) ಬಂಧಿತ ಆರೋಪಿ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ರಥಬೀದಿಯಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸೋಮವಾರ ಬೆಳಿಗ್ಗೆ ಬಂದರು ಠಾಣೆಯ ಪೊಲೀಸರಿಗೆ ಮಾಹಿತಿ ಬಂದಿತ್ತು. ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ತಾನು ಕೇರಳದ ತ್ರಿಶೂರ್ ಜಿಲ್ಲೆಯವನು ಎಂದು ಆತ ತಿಳಿಸಿದ್ದ. ಆತನ ವರ್ತನೆಯಿಂದ ಅನುಮಾನಗೊಂಡು, ಮತ್ತಷ್ಟು ವಿಚಾರಣೆ ನಡೆಸಿದಾಗ, ಅಜ್ಜ ಅಜ್ಜಿಯನ್ನು ಕೊಂದು ಚಿನ್ನಾಭರಗಳೊಂದಿಗೆ ಬಂದಿರುವುದನ್ನು ಆತ ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿಗಳಾದ ಅಂಶು ಕುಮಾರ್ ಮತ್ತು ಬಿ.ಪಿ.ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಎಸಿಪಿ ಮಹೇಶ್ ಕುಮಾರ್ ನಿರ್ದೇಶನದಂತೆ ಬಂದರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು ನೇತೃತೃದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಠಾಣೆಯ ಅಪರಾಧ ಪತ್ತೆ ವಿಭಾಗದ ಎಎಸ್‌ಐ ದಾಮೋದರ್ ಹಾಗೂ ಸಿಬ್ಬಂದಿ ಮದನ್ ಸಿ.ಎಂ, ಸತೀಶ್‌ಹಾಗೂ ಗುರು ಬಿ.ಟಿ. ಭಾಗವಹಿಸಿದ್ದರು’ ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post