ಮಂಗಳೂರು: ಕ್ಯಾನ್ಸರ್ ರೋಗದಿಂದ ತಲೆ ಕೂದಲು ನಷ್ಟವಾಗುವ ರೋಗಿಗಳಿಗೆ ವಿಗ್ ತಯಾರಿಸಲು ನಗರದ ಎಕ್ಕೂರಿನ ಮಂಗಳೂರು ಕೇಂದ್ರೀಯ ವಿದ್ಯಾಲಯ-2ರ 6ನೇ ತರಗತಿ ವಿದ್ಯಾರ್ಥಿನಿ ಡಿಲ್ನಾ ರಾಜೇಶ್ (11) ಕೇಶದಾನ ಮಾಡಿದ್ದಾರೆ.
ತನ್ನ 9ನೇ ವಯಸ್ಸಿನಲ್ಲಿ ರೈಲು ಪ್ರಯಾಣದ ಸಂದರ್ಭ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಕೂದಲು ಉದುರಿದ ರೋಗಿಗಳನ್ನು ಕಂಡಿದ್ದು, ಅವರಿಗೆ ತಾನೂ ನೆರವಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಅದಕ್ಕಾಗಿ 2 ವರ್ಷಗಳಿಂದ ಕೂದಲನ್ನು ಕಾಳಜಿಯಿಂದ ಬೆಳೆಸಿದ್ದರು. ಹುಟ್ಟಿದ ದಿನವಾದ ಜ. 14ರಂದು ಕೇಶದಾನ ಮಾಡುವುದೆಂದು ನಿಗದಿಯಾಗಿ ದ್ದರೂ ಕೋವಿಡ್ ಕಾರಣ ಸಾಧ್ಯ ವಾಗಿರಲಿಲ್ಲ. ಸೆ. 22ರಂದು ಕೇಶದಾನ ಮಾಡಲಾಗಿದೆ.
ಕ್ಯಾನ್ಸರ್ ರೋಗಿಗಳಿಗೆ ನೀಡಲು ಕೂದಲನ್ನು ಸಂಗ್ರಹಿಸುವಲ್ಲಿ ನೈಪುಣ್ಯತೆ ಇರುವ ಮಂಗಳೂರು ಬಿಜೈ ನ್ಯೂ ರೋಡ್ ಪ್ಯಾರಡೈಸ್ ಸ್ಟ್ರೀಕ್ ಕಟ್ಟಡದಲ್ಲಿರುವ ಯಚ್ಚೂಸ್ ಹೇರ್ ಗ್ಯಾರೇಜ್‌ನಲ್ಲಿ ಕೂದಲನ್ನು ಸ್ವಚ್ಛಗೊಳಿಸಿ ಕತ್ತರಿಸಲಾಯಿತು. ಬಡ ಕ್ಯಾನ್ಸರ್ ರೋಗಿಗಳಿಗಾಗಿ ವಿಗ್‌ಗಳನ್ನು ತಯಾರಿಸಿ ನೀಡುವ ಕೇರಳದ ತ್ರಿಶ್ಯೂರಿನ ಮಿರಾಕಲ್ ಚಾರಿಟೇಬಲ್ ಅಸೋಸಿಯೇಶನ್ ನೇತೃತ್ವದ ಹೇರ್ ಬ್ಯಾಂಕ್‌ಗೆ ಕೂದಲನ್ನು ಕಳುಹಿಸಲಾಯಿತು.
ಡಿಲ್ನಾ ಮಂಗಳೂರಿನ ಮಲಯಾಳ ಮನೋರಮಾ ಪತ್ರಿಕೆಯ ವರದಿಗಾರ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೆನಪೋಯ ಕಲಾ,ವಿಜ್ಞಾನ, ವಾಣಿಜ್ಯ ಕಾಲೇಜಿನ ಉಪನ್ಯಾಸಕಿ ಕೆ.ಎಂ.ಜಮುನಾ ದಂಪತಿಗಳ ಪುತ್ರಿ. ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಕಾಂಕೋಲ್ ನವರಾದ ಈ ಕುಟುಂಬ ಪ್ರಸ್ತುತ ಮಂಗಳೂರಿನ ಯಕ್ಕೂರಿನಲ್ಲಿ ನೆಲೆಸಿದೆ.