ಮಂಗಳೂರು: ದೇಶದಲ್ಲಿ ಎಲ್‌ಪಿಜಿ ಆಮದು ಮಾಡಿಕೊಳ್ಳುವ ಎರಡನೇ ಅತಿದೊಡ್ಡ ಬಂದರು ಎನ್‌ಎಂಪಿಟಿ. ಇಲ್ಲಿ ₹2,300 ಕೋಟಿ ವೆಚ್ಚದಲ್ಲಿ ಗ್ಯಾಸ್ ಟರ್ಮಿನಲ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಹಡಗು, ಬಂದರು, ಜಲಸಾರಿಗೆ ಹಾಗೂ ಆಯುಷ್ ಸಚಿವ ಸರ್ಬಾನಂದ ಸೋನೊವಾಲ ತಿಳಿಸಿದರು.
ನಗರದ ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) ಶುಕ್ರವಾರ ನೂತನ ವಹಿವಾಟು ಅಭಿವೃದ್ಧಿ ಕೇಂದ್ರದ ಉದ್ಘಾಟನೆ, ಮಲ್ಯ ಪ್ರವೇಶ ದ್ವಾರದ ಆಧುನೀಕರಣ ಹಾಗೂ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
1975 ರಲ್ಲಿ ಆರಂಭವಾದ ಎನ್‌ಎಂಪಿಟಿ 47 ವರ್ಷಗಳಿಂದ ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. 1 ಲಕ್ಷ ಟನ್ ಸಾಮರ್ಥ್ಯದಿಂದ ಇದೀಗ 3.65 ಕೋಟಿ ಟನ್ ಸರಕು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಪಡೆದಿದೆ ಎಂದರು.
ಎನ್‌ಎಂಪಿಟಿ ಶೇ 100 ರಷ್ಟು ಸೌರ ವಿದ್ಯುತ್ ಪಡೆಯುತ್ತಿದ್ದು, ನೀರಿನಲ್ಲೂ ಶೇ 100 ರಷ್ಟು ಸ್ವಾವಲಂಬನೆ ಪಡೆದಿದೆ. ಈ ಬಂದರಿನ ಮೂಲಕ ಅತಿ ಹೆಚ್ಚಿನ ಪ್ರಮಾಣದ ಕಾಫಿ ರಫ್ತಾಗುತ್ತಿದೆ ಎಂದು ತಿಳಿಸಿದರು.
ಇದೀಗ ಮಲ್ಯ ಪ್ರವೇಶದ್ವಾರದ ಆಧುನೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಚತುಷ್ಪಥ ರಸ್ತೆ ನಿರ್ಮಾಣ ಆಗಲಿದೆ. ಜೊತೆಗೆ ಆಧುನಿಕ ಸೌಲಭ್ಯಗಳುಳ್ಳ ಟ್ರಕ್ ಟರ್ಮಿನಲ್ ಕೂಡ ನಿರ್ಮಿಸಲಾಗುತ್ತಿದೆ. ಇದರಿಂದ ಎನ್‌ಎಂಪಿಟಿ ಸರಕು ನಿರ್ವಹಣೆ ಇನ್ನಷ್ಟು ಸುಗಮ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಆಧುನಿಕ ಸೌಲಭ್ಯ ಒದಗಿಸುವ ಮೂಲಕ ಎನ್‌ಎಂಪಿಟಿಯನ್ನು ಜಗತ್ತಿನ ಉನ್ನತ ಬಂದರನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ರಫ್ತುದಾರರಿಗೆ ಇದರಿಂದ ಅನುಕೂಲ ಆಗಲಿದ್ದು, ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೂ ಸಹಕಾರ ಸಿಗಲಿದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post