ಮಂಗಳೂರು : ಹಾವು ಎಂದಾಕ್ಷಣ ಭಯ ಬಿಳೋದೇ ಜಾಸ್ತಿ. ಆದರೆ ಈ ಯುವತಿಗೆ ಹಾವು ಅಂದ್ರೆ ಬಲು ಪ್ರೀತಿ. ಮಂಗಳೂರಿನ ಈ ಪದವಿ ವಿದ್ಯಾರ್ಥಿನಿಗೆ ಹಾವುಗಳೆಂದರೆ ಪ್ರೀತಿ. ಹೌದು, ನಗರದ ಅಶೋಕನಗರ ನಿವಾಸಿ, ಸಂತ ಅಲೋಶಿಯಸ್ ಕಾಲೇಜಿನ ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ ಶರಣ್ಯಾ ಭಟ್ ಹಾವಿನ ರಕ್ಷಣೆ ಮಾಡುತ್ತಿರುವ ಯುವತಿ. ಎಲ್ಲಿಯೇ ಹಾವುಗಳು ಕಂಡುಬಂದರೂ ಶರಣ್ಯಾ ಭಟ್ ಅವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಯಾವ ಭಯವೂ ಇಲ್ಲದೆ 100ಕ್ಕೂ ಅಧಿಕ ವಿಷದ ಹಾವು, ಕಟ್ಟ ಹಾವು, ನಾಗರಹಾವು, ಹೆಬ್ಬಾವು, ಕೇರೆ ಹಾವು, ನೀರು ಹಾವು ಸೇರಿದಂತೆ ಹಲವಾರು ವಿಷಕಾರಿ ಸರಿಸೃಪಗಳನ್ನು ಹಿಡಿದು ರಕ್ಷಿಸಿದ್ದಾರೆ. ಕಳೆದ 2 ವರ್ಷಗಳಿಂದ ಶರಣ್ಯಾ ಹಾವು ಹಿಡಿದು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

ಹಾವು ಮನೆಯೊಳಗೆ ಬಂದು, ಅದರಿಂದ ತೊಂದರೆ ಇದೆ ಎಂದಾದರೆ ಮಾತ್ರ ಅಂತಹ ಸ್ಥಳಕ್ಕೆ ಹೋಗಿ ಹಾವನ್ನು ಹಿಡಿದು ಕಾಡಿಗೆ ಬಿಡುತ್ತಾರೆ ಶರಣ್ಯ. ಒಂದು ವೇಳೆ ಅದು ಮನೆಯ ಪಕ್ಕ, ಬಿಲ, ತೋಡುಗಳಲ್ಲಿ ಕಂಡುಬಂದರೆ ಅದನ್ನು ಹಿಡಿಯುವುದಿಲ್ಲ. ಯಾಕೆಂದರೆ ಹಾವುಗಳ ಆವಾಸ ಸ್ಥಾನ ಅದೇ ಆಗಿರುವುದರಿಂದ ಕೇವಲ ಮನೆಯೊಳಗೆ ಬರುವ ಹಾವುಗಳನ್ನು ಮಾತ್ರ ಹಿಡಿಯುತ್ತೇನೆ ಅನ್ನೋದು ಶರಣ್ಯಾಳ ನಿರ್ಧಾರವಾಗಿದೆ.
ಗೆಳತಿಯರೇ ಮೊದಲ ಹಾವು ಹಿಡಿಯುವ ಚಾಲೆಂಜ್ ನೀಡಿದ್ದರು :
ಶರಣ್ಯಾಳಿಗೆ ಮೊದಲು ಅವರ ಗೆಳತಿಯರೇ ಹಾವು ಹಿಡಿಯುವ ಬಗ್ಗೆ ಚಾಲೆಂಜ್ ನೀಡಿದ್ದರು. ಎರಡು ವರ್ಷಗಳ ಹಿಂದೆ ಮಂಗಳೂರಿನ ಬಿಜೈ ಬಳಿ ಕನ್ನಡಿ ಹಾವು ಪತ್ತೆಯಾಗಿದ್ದು, ಕೂಡಲೇ ಶರಣ್ಯಾಳ ಸ್ನೇಹಿತೆಯರು ಕರೆ ಮಾಡಿ, ಹಾವು ಹಿಡಿಯಲು ಹೇಳಿದ್ದರು. ಸ್ನೇಹಿತೆಯರ ಚಾಲೆಂಜ್ ಸ್ವೀಕರಿಸಿದ ಶರಣ್ಯಾ ಯಶಸ್ವಿಯಾಗಿ ನಿಭಾಯಿಸಿದರು.