ಉಳ್ಳಾಲ, ಮಾ.26: ಸ್ಕೂಟರ್ ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮಹಿಳೆ ದಾರುಣ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕಾಪಿಕಾಡು ಎಂಬಲ್ಲಿ ನಡೆದಿದ್ದು, ಹಿಟ್ & ರನ್ ನಡೆಸಿದ ಕಾರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತೊಕ್ಕೊಟ್ಟು ಸಮೀಪದ ಕಾಪಿಕಾಡು ಉಮಾಮಹೇಶ್ವರಿ ದೇವಸ್ಥಾನದ ಬಳಿಯ ಪ್ರತಿಷ್ಠಿತ ಜಾನ್ ಬೇಕರಿ ಕುಟುಂಬದ ಎಮಿಲ್ಡಾ ಡಿಸೋಜ (59) ಮೃತ ಮಹಿಳೆ. ಇಂದು ಮೊಮ್ಮಗಳ ಹುಟ್ಟುಹಬ್ಬ ಆಚರಣೆ ಇದ್ದ ಕಾರಣ ಎಮಿಲ್ಡ ಅವರು ಬೆಳ್ಳಂಬೆಳಗ್ಗೆ ತೊಕ್ಕೊಟ್ಟು ಚರ್ಚ್ ಗೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಹಿಂತಿರುಗಿದ್ದರು. ಅರ್ಧ ದಾರಿಯ ವರೆಗೂ ಸಂಬಂಧಿಕರ ಜತೆಗೆ ನಡೆದುಕೊಂಡೇ ಬರುತ್ತಿದ್ದ ಅವರನ್ನ ಪ್ಲೇವಿ ಡಿಸೋಜ ಎಂಬ ಪರಿಚಯಸ್ಥ ಮಹಿಳೆ ತನ್ನ ಆಕ್ಟಿವಾ ಸ್ಕೂಟರಿಗೆ ಹತ್ತಿಸಿದ್ದಾರೆ. ಚಕ್ರ ವಾಹನ ಕಾಪಿಕಾಡು ರಾಜ್ ಕೇಟರರ್ಸ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಎಮಿಲ್ಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಸ್ಕೂಟರ್ ಚಲಾಯಿಸುತ್ತಿದ್ದ ಪ್ಲೇವಿ ಡಿಸೋಜ(47) ಕೂಡಾ ಗಾಯಗೊಂಡಿದ್ದ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯಲ್ಲಿ ಮೊಮ್ಮಗುವಿನ ಹುಟ್ಟುಹಬ್ಬಕ್ಕಾಗಿ ಎಮಿಲ್ಡ ಅವರು ಇಡ್ಲಿಗಳನ್ನ ತರಿಸಿ ಊಟಕ್ಕೆ ತಯಾರಿ ನಡೆಸಿದ್ದರಂತೆ. ಮೊಮ್ಮಗಳ ಹುಟ್ಟುಹಬ್ಬದ ದಿವಸವೇ ಎಮಿಲ್ಡ ಅವರು ಇಹಲೋಕ ತ್ಯಜಿಸಿದ್ದು ಕುಟುಂಬ ವರ್ಗದವರನ್ನ ಶೋಕದಲ್ಲಿ ಮುಳುಗಿಸಿದೆ. ಮೃತ ಎಮಿಲ್ಡ ಅವರು ಪತಿ, ಪುತ್ರ, ಪುತ್ರಿ, ಮೊಮ್ಮಕ್ಕಳನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post