ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿದಿನ ಟಿಪ್ಪು ಹೆಸರಿನಲ್ಲಿ ನಡೆಯುವ ಸಲಾಂ ಮಹಾಮಂಗಳಾರತಿ ನಿಲ್ಲಿಸಬೇಕು ಎಂದು ಎಂದು ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪವಿತ್ರ ಕ್ಷೇತ್ರವಾಗಿದ್ದು, 108 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಆದಿ ಶಂಕರಾಚಾರ್ಯರು ಮೂಕಾಂಬಿಕಾ ದೇವಿಯನ್ನು ಕೊಲ್ಲೂರಿನಲ್ಲಿ ನೆಲೆಗೊಳಿಸಿದ್ದಾರೆ. ಮತಾಂಧ ಟಿಪ್ಪು ಹೆಸರಿನಲ್ಲಿ ಕೊಲ್ಲೂರು ದೇವಸ್ಥಾನದಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಸಲಾಂ ಹೆಸರಿನಲ್ಲಿ ಮಹಾಮಂಗಳಾರತಿ ನಡೆಯುತ್ತಿರುವುದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡಿದೆ.
ಸಲಾಂ ಹೆಸರಿನಲ್ಲಿ ನಡೆಯುವ ಮಹಾಮಂಗಳಾರತಿ ಗುಲಾಮಗಿರಿಯ ಸಂಕೇತವಾಗಿದ್ದು, ತಕ್ಷಣ ಕ್ಷೇತ್ರದ ವ್ಯವಸ್ಮಾಪನಾ ಮಂಡಳಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ‘ಸಲಾಂ’ ಹೆಸರು ತೆಗೆದುಹಾಕಿ ದೇವರ ಹೆಸರಿನಲ್ಲಿ ಮಹಾಮಂಗಳಾರತಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ನೇತೃತ್ವದಲ್ಲಿ ಸದಸ್ಯರು ದೇವಾಲಯದ ಅಧಿಕಾರಿಗಳ ಬಳಿ ಆಗ್ರಹಿಸಿದೆ.
ಶ್ರೀ ಕ್ಷೇತ್ರಕ್ಕೆ 1765ರಿಂದ 1795ರ ನಡುವೆ ಟಿಪ್ಪು ಸುಲ್ತಾನ್ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದ ನೆನಪಿನಲ್ಲಿ ನಿತ್ಯ ಕೊಲ್ಲೂರು ದೇವಾಲಯದಲ್ಲಿ ಸಲಾಂ ಮಂಗಳಾರತಿ ನಡೆಯುತ್ತಿದೆ. ಪ್ರತಿ ದಿನ ರಾತ್ರಿ 8 ರಿಂದ 8:15ರ ನಡುವೆ ಪರಿವಾರ ದೇವತೆಗಳ ಪೂಜೆ ಬಳಿಕ ನಡೆಯುವ ಮಂಗಳಾರತಿ (ಸುತ್ತು ಸಲಾಂ) ಪೂಜೆಗೆ ಸಲಾಂ ಮಂಗಳಾರತಿ ಎನ್ನುವ ಹೆಸರು ಉಳಿದಿದೆ.
Discussion about this post