ನವದೆಹಲಿ: ಭಯೋತ್ಪಾದನಾ ಕೃತ್ಯ ಗಳಿಗೆ ಹಣಕಾಸು ಒದಗಿಸಿದ ಪ್ರಕರಣ ದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಹಾಗೂ ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್‌ಗೆ ದೆಹಲಿ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ‘ಜಮ್ಮು ಮತ್ತು ಕಾಶ್ಮೀರವನ್ನು ಒತ್ತಾಯಪೂರ್ವಕವಾಗಿ ಬೇರ್ಪಡಿಸುವ ಉದ್ದೇಶ ಹೊಂದಿದ್ದ ಅಪರಾಧವು ಗಂಭೀರ ಸ್ವರೂಪದಿಂದ ಕೂಡಿದೆ’ ಎಂದು ಕೋರ್ಟ್ ಹೇಳಿದೆ. ಪ್ರಕರಣದ ವಿಚಾರಣೆ ನಡೆಸಿದ ದೆಹಲಿಯ ಎನ್ಐಎ ಕೋರ್ಟ್ ಮೇ 19 ರಂದು ಯಾಸಿನ್ ಮಲಿಕ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್ ಉಗ್ರರಿಗೆ ಆರ್ಥಿಕ ನೆರವು ನೀಡಿದ ಯಾಸಿನ್ ಮಲಿಕ್ ಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಯಾಸಿನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕು ಎಂದು ವಿಚಾ ರಣೆ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಗ್ರಹಿಸಿತ್ತು. ‘ವಿದೇಶಿ ಶಕ್ತಿಗಳು ಹಾಗೂ ಘೋಷಿತ ಭಯೋತ್ಪಾದಕರ ಸಹ ಕಾರದಿಂದ ಯಾಸಿನ್ ಮಲಿಕ್ ಎಸಗಿ ರುವ ಕೃತ್ಯಗಳು ಗಂಭೀರ ಸ್ವರೂಪದ್ದಾಗಿವೆ’ ಎಂದು ಎನ್‌ಐಎನ ವಿಶೇಷ ನ್ಯಾಯಾಧೀಶ ಪರ್ವೀನ್ ಸಿಂಗ್ ಅವರು ಉಲ್ಲೇಖಿಸಿದರು. ‘ಶಾಂತಿಯುತ ರಾಜಕೀಯ ಚಳವಳಿಯ ನೆಪದಲ್ಲಿ ಅಪರಾಧ ನಡೆದಿರುವ ಕಾರಣ, ಪ್ರಕರಣದ ಗಂಭೀರತೆ ಹೆಚ್ಚಾಗಿದೆ’ ಎಂದು ಅವರು ಹೇಳಿದರು.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಸೇರಿ ಹಲವು ಕಾಯ್ದೆಗಳ ಅಡಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರತ್ಯೇಕ ಶಿಕ್ಷೆಯನ್ನು ವಿಧಿಸಿದೆ. ಜತೆಗೆ ಪ್ರತ್ಯೇಕವಾಗಿ ದಂಡವನ್ನೂ ವಿಧಿಸಿದೆ. ಆದರೆ ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಬೇಕು ಎಂದು ನ್ಯಾಯಾಲಯವು ಹೇಳಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಗಂಭೀರ ಅಪರಾಧವಾಗಿದ್ದು, ಅದಕ್ಕೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಮೇ 19ರಂದು ಮಲಿಕ್ ದೋಷಿ ಎಂದು ಪ್ರಕಟಿಸಿದ್ದ ಕೋರ್ಟ್, ತನ್ನ ವಿರುದ್ಧದ ಆರೋಪವನ್ನು ಒಪ್ಪಿಕೊಳ್ಳುವಂತೆ ಮಲಿಕ್‌ಗೆ ಎರಡು ಬಾರಿ ಅವಕಾಶ ನೀಡಿತ್ತು. ಶಿಕ್ಷೆ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗುವ ಅವಕಾಶ ಮಲಿಕ್‌ಗೆ ಇದೆ. 1994ರಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ ಬಳಿಕ ಗಾಂಧೀಜಿ ಅವರ ತತ್ವಾದರ್ಶಗಳನ್ನು ಪಾಲಿಸುತ್ತಿರುವುದಾಗಿ ಮಲಿಕ್ ಹೇಳಿದ್ದಾನೆ. ಮರಣದಂಡನೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಮಲಿಕ್, ‘ಯಾವುದಕ್ಕೂ ನಾನು ಬೇಡಿಕೆಯಿಡುವುದಿಲ್ಲ. ಕೋರ್ಟ್ ನಿರ್ಧಾರ ತೆಗೆದುಕೊಳ್ಳಲಿ. ವಿ.ಪಿ. ಸಿಂಗ್‌ರಿಂದ ಅಟಲ್ ಬಿಹಾರಿ ವಾಜಪೇಯಿ ಅವರವರೆಗೆ ಎಲ್ಲ ಪ್ರಧಾನಿಗಳನ್ನು ಭೇಟಿಯಾಗಿದ್ದೇನೆ. ಅವರು ನನ್ನ ರಾಜಕೀಯ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ನೀಡಿದ್ದರು’ ಎಂದಿದ್ದಾನೆ.
‘ಗಾಂಧಿ ತತ್ವಗಳಾದ ಅಹಿಂಸೆ ಹಾಗೂ ಶಾಂತಿ ಪರಿಪಾಲನೆ ಮಾಡುತ್ತಿರುವುದಾಗಿ ದೋಷಿ ಹೇಳಿದ್ದಾನೆ. ಆದರೆ ಇಡೀ ಚಳವಳಿಯು ಹಿಂಸಾತ್ಮಕ ಉದ್ದೇಶದಿಂದ ಕೂಡಿತ್ತು. ಇಡೀ ಕಣಿವೆಯಲ್ಲಿ ದೊಡ್ಡ ಮಟ್ಟದ ಹಿಂಸಾಚಾರ ನಡೆದರೂ ದೋಷಿಯು ಎಂದಿಗೂ ಅದನ್ನು ಖಂಡಿಸಲಿಲ್ಲ’ ಎಂದು ಕೋರ್ಟ್ ಹೇಳಿತು. ಕೋರ್ಟ್ ತೀರ್ಪು ಪ್ರಕಟಿಸುವ ಮುನ್ನ ಶ್ರೀನಗರದ ಕೆಲವು ಭಾಗಗಳಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿತ್ತು. ನಗರದ ಕೆಲವು ಭಾಗಗಳಲ್ಲಿ ಅಂಗಡಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳು ಬಂದ್ ಆಗಿದ್ದವು. ಆದಾಗ್ಯೂ, ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ವಾಹನಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಶ್ರೀನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು-ಸುವ್ಯವಸ್ಥೆ ಹದಗೆಡದಂತೆ ಪರಿಸ್ಥಿತಿಯನ್ನು ನಿಭಾಯಿಸಿಲು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post