ಮಂಗಳೂರು: ನೈಋತ್ಯ ಶಿಕ್ಷಕರ ಕ್ಷೇತ್ರ ಅತ್ಯಂತ ಸುಶಿಕ್ಷಿತ ಮತದಾರರ ಕ್ಷೇತ್ರವೆನಿಸಿದೆ.ಇಲ್ಲಿನ ಮತದಾರರು ಕನಿಷ್ಠ ಎರೆಡೆರಡು ಪದವಿಗಳನ್ನು ಪಡೆದವರು ಈ ಕ್ಷೇತ್ರವನ್ನು ವಿದ್ಯಾವಂತ ಮತ್ತು ಸ್ವತಃ ಶಿಕ್ಷಕನೇ ಆಗಿರುವ ಅಭ್ಯರ್ಥಿಯೇ ಪ್ರತಿನಿಧಿಸಬೇಕು ಎಂಬ ಪರಿಕಲ್ಪನೆಯಡಿ ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ತಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ವಹಿಸಿರುವುದಾಗಿ ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ನರೇಶ್ಚಂದ್ರ ಹೆಗ್ಡೆ ಹೆಬ್ರಿಬೀಡು ತಿಳಿಸಿದ್ದಾರೆ. ನಗರದ ಓಶಿಯನ್ ಪರ್ಲ್‌ನಲ್ಲಿ ಶನಿವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನೈರುತ್ಯ ಶಿಕ್ಷಕರ ಕ್ಷೇತ್ರ ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು, ಕೆಲವೊಂದು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಈ ಸುಶಿಕ್ಷಿತ ಮತದಾರರ ಕ್ಷೇತ್ರದ ಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿರುವುದು ಮಾತ್ರ ವಿಪರ್ಯಾಸ ಎಂದು ಅವರು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ವೃತ್ತಿ ಶಿಕ್ಷಣ ಕಾಲೇಜುಗಳ ವಿವಿಧ ಹಂತಗಳ ಶೈಕ್ಷಣಿಕ ಸಂಸ್ಥೆಗಳ, ಭಾಷಾ ಮಾಧ್ಯಮದ, ಬೋಧಕ , ಬೋಧಕೇತರ, ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ವಿದ್ಯಾಸಂಸ್ಥೆ ಆಡಳಿತ ಮಂಡಳಿಗಳ ಬಹುಮುಖಿ ಸಮಸ್ಯೆಗಳನ್ನು ತಜ್ಞರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಲು ಕಾರ್ಯೋನ್ಮುಖವಾಗುವುದಾಗಿ ತಿಳಿಸಿದರು.
ಓರ್ವ ಹ್ರದ್ರೋಗ ಶಸ್ತ್ರಚಿಕಿತ್ಸಾ ತಜ್ಞನಾಗಿ ಹ್ರದ್ರೋಗ ಮತ್ತು ತತ್ಸಂಬಂಧಿ ವಿಷಯಗಳ ಒಟ್ಟು ಇಪ್ಪತ್ತು ವಿಧದ ಬಹು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಕೈಗೊಂಡು ,ಬಹು ದೊಡ್ಡ ಸಂಖ್ಯೆಯ ರೋಗಿಗಳಿಗೆ ಜೀವದಾನ ಮಾಡಿರುವ ವಿನೀತ ಮತ್ತು ವಿನಮ್ರ ಭಾವ ನನಗಿದೆ ಬಹುಬೇಡಿಕೆಯ ಬಿ.ಎಸ್ಸಿ ಮತ್ತು ಎಂ.ಎಸ್ಸಿ (ಪರ್ಪ್ಯೂಷನ್ ಟೆಕ್ನಾಲಜಿ) ಕೋರ್ಸ್ ಗಳಿಗೆ ಸಂಪೂರ್ಣ ಪಠ್ಯಕ್ರಮ ಮತ್ತು ಶಿಷ್ಟಾಚಾರ ನಿಯಮಗಳನ್ನು ರಚಿಸುವ ಮೂಲಕ ಉನ್ನತ ಶಿಕ್ಷಣದ ಪಠ್ಯ ರಚನಾ ಕ್ಷೇತ್ರದಲ್ಲೂ ಕೈಯಾಡಿಸಿರುವುದಾಗಿ ತಿಳಿಸಿದರು. ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳ ನಿರ್ಮಾಣ ಅಗತ್ಯ. ಅದೇ ರೀತಿ ಸರಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿ ಹೇಳಿದರು.
ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು ಎಂ.ಬಿ.ಬಿ.ಎಸ್, ಎಂ.ಎಸ್ (ಸರ್ಜರಿ) ಮತ್ತು ಎಂಸಿಎಚ್ (ಸಿಟಿವಿಎಸ್ ) ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದೇನೆ. ನಾನು ಈ ವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ, ಮೆಲಕಾ-ಮಣಿಪಾಲ ಮೆಡಿಕಲ್ ಕಾಲೇಜು ಮಲೇಷ್ಯಾ, ಶ್ರೀಸತ್ಯಸಾಯಿ ಉನ್ನತ ವೈದ್ಯಕೀಯ ಸಂಸ್ಥೆ, ಬೆಂಗಳೂರು, ಶ್ರೀಗೋಕುಲಂ ಸ್ಪೆಷಾಲಿಟಿ ಆಸ್ಪತ್ರೆ ಸೇಲಂ ತಮಿಳುನಾಡು , ಶ್ರೀರಾಜರಾಜೇಶ್ವರಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಯಲ್ಲಿ ಸಹಾಯಕ ಪ್ರಾಧ್ಯಾಪಕ ,ಪ್ರಾಧ್ಯಾಪಕ, ಸಮಾಲೋಚಕ ಮತ್ತು ಹಿರಿಯ ಕುಲಸಚಿವ ಮೊದಲಾದ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿರುವುದಾಗಿ ವಿವರಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post