ಉಳ್ಳಾಲ: ಇಲ್ಲಿನ ಉಚ್ಚಿಲ ಸಮೀಪದ ಸೋಮೇಶ್ವರದ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಸಿರಿಯಾದ ಹಡಗಿನ ಸುತ್ತ ಕರಾವಳಿ ರಕ್ಷಣಾ ಪಡೆ ತೀತ್ರ ನಿಗಾ ಇರಿಸಿದ್ದು ಸಂಭವನೀಯ ಅಪಾಯ ತಡೆಯಲು ಕೈಗೊಳ್ಳಲಿರುವ ಕಾರ್ಯಾಚರಣೆಗೆ ಸಮುದ್ರ ಪಾವಕ್ ಬಲ ತುಂಬಲಿದೆ. ಎಂ.ವಿ ಪ್ರಿನ್ಸಸ್ ಮಿರಾಲ್ ಹಡಗಿನ ಸುತ್ತ ಐದು ದಿನಗಳಿಂದ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು 9 ನೌಕೆಗಳು ಮತ್ತು 3 ಏರ್ ಕ್ರಾಫ್ಟ್‌ಗಳನ್ನು ಇದಕ್ಕಾಗಿ ಬಳಸಲಾಗಿದೆ. ಪೋರ್‌ಬಂದರ್‌ನಿಂದ ಬಂದಿರುವ ಸಮುದ್ರ ಪಾವಕ್ ಶನಿವಾರ ಇಲ್ಲಿಗೆ ತಲುಪಿದೆ. ತೈಲ ಸೋರಿಕೆಯಾದರೆ ಅಪಾಯ ತಡೆಯಲು ನಡೆಸುವ ಕ್ರಮಗಳ ಅಣಕು ಕಾರ್ಯಾಚರಣೆ ಶನಿವಾರ ನಡೆಯಿತು. 160 ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ʻಹಡಗಿನಲ್ಲಿ 160 ಮೆಟ್ರಿಕ್ ಟನ್ ತೈಲ ಹಾಗೂ 60 ಮೆಟ್ರಿಕ್ ಟನ್ ಎಂಜಿನ್ ಆಯಿಲ್ ಇದೆ. ಸೋರಿಕೆಯಾಗದಂತೆ ಇದನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ’ ಎಂದರು. ‘ಆಯಿಲ್ ಸ್ಪಿಲ್ ಕ್ರೈಸಿಸ್ ತಂಡ ಹಾಗೂ ತಾಂತ್ರಿಕ ತಜ್ಞರ ಸಲಹೆ ಪಡೆದು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತೈಲ ಸೋರಿಕೆಯಾದರೂ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲಾಗುವುದು. ಹಡಗಿನೊಳಗೆ ಇದ್ದ 15 ಮಂದಿ ಸಿರಿಯಾ ಪ್ರಜೆಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತೈಲವನ್ನು ಸುರಕ್ಷಿತವಾಗಿ ಹೊರತೆಗೆದ ನಂತರ ಮುಳುಗಡೆಯ ಬಗ್ಗೆ ತನಿಖೆ ನಡೆಯಲಿದೆ’ ಎಂದು ಅವರು ತಿಳಿಸಿದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಗೃಹರಕ್ಷಕ ದಳ, ಕರಾವಳಿ ರಕ್ಷಣಾ ಪಡೆ, ಕರಾವಳಿ ಕಾವಲು ಪಡೆ ಹಾಗೂ ಉಳ್ಳಾಲ ಠಾಣೆಯ ಪೊಲೀಸರು ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಳ್ಳಾಲ ನಗರಸಭೆ ಆಯುಕ್ತರಾದ ವಿದ್ಯಾ ಕಾಳೆ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post