ಮಂಗಳೂರು: ಪಠ್ಯಪುಸ್ತಕದಿಂದ ನಾರಾಯಣ ಗುರುಗಳ ಪಾಠವನ್ನು ಕೈಬಿಟ್ಟಿರುವುದು, ದೇವರಾಜ ಅರಸು ನಿಗಮದಡಿ ಬಿಲ್ಲವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಕತ್ತರಿ ಹಾಕಿರುವುದು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲು ಮತ್ತು ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಮಂಗಳೂರಿನ ನಾಗುರಿಯಲ್ಲಿನ ಗರೋಡಿಯಲ್ಲಿ ಬಿಲ್ಲವ ಮುಖಂಡರ ಸಭೆ ನಡೆಯುತ್ತಿದ್ದು ಶನಿವಾರ ಮಂಗಳೂರಿಗೆ ಬರುವ ರೋಹಿತ್ ಚಕ್ರತೀರ್ಥ ಅವರಿಗೆ ಸನ್ಮಾನ ಮಾಡಲು ಬಿಡದಿರಲು ನಿರ್ಧರಿಸಲಾಗಿದೆ.
ಪಠ್ಯಪುಸ್ತಕದಿಂದ ನಾರಾಯಣ ಗುರು ಬಗ್ಗೆಗಿನ ವಿಚಾರವನ್ನು ಕೈ ಬಿಟ್ಟಿರುವುದು ಅಕ್ಷಮ್ಯ. ಅದಲ್ಲದೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಸ್ಥಾಪಿಸಬೇಕು ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿಚೆನ್ನಯರ ಹೆಸರನ್ನು ನಾಮಕರಣ ಮಾಡಬೇಕು. ದೇವರಾಜ ಅರಸು ನಿಗಮದಿಂದ ಹಿಂದುಳಿದ ವರ್ಗಕ್ಕೆ ಶೇ.೨ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡುತ್ತಿದ್ದುದನ್ನು ಕೋವಿಡ್ ನೆಪದಲ್ಲಿ ನಿಲ್ಲಿಸಲಾಗಿದೆ. ಇದರಿಂದ ಹಿಂದುಳಿದ ವರ್ಗದ ವಿದ್ಯಾರ್ಥಿ ಸಮೂಹಕ್ಕೆ ಭಾರೀ ಅನ್ಯಾಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗು ವುದು ಮತ್ತು ಬಿಲ್ಲವ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಪದ್ಮರಾಜ್ ಆರ್. ತಿಳಿಸಿದ್ದಾರೆ.
ಜೂ.25ರ ಸಂಜೆ 4ಕ್ಕೆ ನಗರದ ನವಭಾರತ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗುವುದು. ಅದಲ್ಲದೆ ಪ್ರತೀ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಸಭೆಗಳನ್ನು ಆಯೋಜಿಸಿ, ಅಂತಿಮವಾಗಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗು ವುದು ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ಸಭೆಯಲ್ಲಿ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕಂಕನಾಡಿ ಗರಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಿತ್ತರಂಜನ್ ಕೆ., ಗೆಜ್ಜೆಗೆರಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಪಿತಾಂಬರ ಹೆರಾಜೆ, ಮನಪಾ ಸದಸ್ಯ ಅನಿಲ್ ಪೂಜಾರಿ, ಶ್ರೀಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶೈಲೇಂದ್ರ ವೈ. ಸುವರ್ಣ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್, ಬೇಬಿ ಕುಂದರ್, ರವಿ ಚಿಲಿಂಬಿ ಉಪಸ್ಥಿತರಿದ್ದರು.