ಗದಗ, ನ.25: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಪುರ್ತಗೇರಿ ಗ್ರಾಮದಲ್ಲಿ ಒಂಬತ್ತು ತಿಂಗಳ ಹಸುಗೂಸನ್ನು ಎತ್ತಿ ಮುದ್ದಾಡಿ ಆಟವಾಡಿಸಬೇಕಿದ್ದ ಅಜ್ಜಿಯೇ ಕೊಲೆ ಮಾಡಿದ ಘಟನೆ ನಡೆದಿದೆ. ಗಜೇಂದ್ರಗಡ ತಾಲೂಕಿನ ನಾಗರತ್ನ ಹಾಗೂ ಲಕ್ಷ್ಮಣ ಎಂಬುವವರ ಜೊತೆಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಲಕ್ಷ್ಮಣ ಕುಡಿತಕ್ಕೆ ದಾಸನಾಗಿದ್ದ. ಆದರೂ ನಾಗರತ್ನ ಕಷ್ಟ-ಸುಖ ಎಂದು ಗಂಡನ ಮನೆಯಲ್ಲಿಯೇ ಜೀವನ ನಡೆಸುತ್ತಿದ್ದಳು. ಆದರೆ, ಅತ್ತೆ ಸರೋಜಾ ಎಂಬುವವರು ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಯಾವಾಗ ನಾಗರತ್ನ ಗರ್ಭಿಣಿಯಾದಳೋ ಆಗಿನಿಂದ ಅತ್ತೆಯ ಕಿರುಕುಳ ಹೆಚ್ಚಾಗಿದೆಯಂತೆ. ಮಗು ಹೊಟ್ಟೆಯಲ್ಲಿ ಇದ್ದಾಗಲೇ ತೆಗೆದು ಹಾಕುವಂತೆ ಒತ್ತಾಯ ಕೂಡ ಮಾಡಿದ್ದಳಂತೆ. ಅತ್ತೆಯ ಮಾತು ಕೇಳದೆ ತನ್ನ ಕರುಳಿನ ಕುಡಿಯನ್ನು ಉಳಿಸಿಕೊಂಡಿದ್ದರು.
ಅತ್ತೆಯೇ ಕೊಲೆ ಮಾಡಿದ್ದಾಳೆ ಎಂದು ಸೊಸೆಯಿಂದ ಠಾಣೆಗೆ ದೂರು : ಹೆರಿಗೆಗೆ ತವರು ಮನೆಗೆ ಬಂದ ನಾಗರತ್ನಾಳನ್ನು ಕೇವಲ 5 ತಿಂಗಳಿಗೆ ಗಂಡನ ಮನೆ ಕರೆಸಿಕೊಂಡಿದ್ರು. ಇನ್ನು ಮನೆಗೆ ಮುದ್ದಾದ ಗಂಡು ಮಗು ಬಂದರೂ ಅತ್ತೆಯ ಮನಸ್ಸು ಮಾತ್ರ ಕರಗಿಲ್ಲವಂತೆ. ಆಗಲೂ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಅಷ್ಟೇ ಅಲ್ಲ, ಒಂಬತ್ತು ತಿಂಗಳ ಕೂಸನ್ನು ಮನೆಯಲ್ಲಿ ಬಿಟ್ಟು ನಾಗರತ್ನಳನ್ನು ಜಮೀನನ ಕೆಲಸಕ್ಕೆ ಕಳಿಸುತ್ತಿದ್ದರಂತೆ. ಅದರಂತೆ ನವೆಂಬರ್ 22 ರಂದು ಕೂಸಿಗೆ ಊಟ ಮಾಡಿಸಿ, ಜಮೀನಿನ ಕೆಲಸಕ್ಕೆ ಹೋಗಿದ್ದಳು. ಆದ್ರೆ, ತಾಯಿ ಜಮೀನಿಗೆ ಹೋಗಿ ಮನೆ ವಾಪಾಸ್ ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ಗಂಡನ ಮನೆಯವರು ಹೇಳಿದ್ದಾರೆ. ಹಸುಗೂಸಿಗೆ ಅಡಿಕೆ ಹಾಗೂ ಎಲೆಯ ತುಂಬನ್ನು ಹಾಕಿ ಉಸಿರುಗಟ್ಟಿಸಿ ಅತ್ತೆ ಸರೋಜ ಕೊಲೆ ಮಾಡಿದ್ದಾಳೆ ಎಂದು ಸೊಸೆ ನಾಗರತ್ನ ದೂರು ದಾಖಲು ಮಾಡಿದ್ದಾಳೆ.
ಆಸ್ತಿ ಗಂಡು ಮಗುವಿಗೆ ಹೋಗುತ್ತೆ ಎಂದು ಕೊಲೆ ಮಾಡಿದಳಾ ಅಜ್ಜಿ?: ಇನ್ನು ಪುರ್ತಗೇರಿ ಗ್ರಾಮದಲ್ಲಿ ನೀರಾವರಿ ಜಮೀನು ಇದೆ. ನಾಗರತ್ನ ಗಂಡ ಮೊದಲೇ ಕುಡುಕ. ಎಲ್ಲಾ ಆಸ್ತಿ ಎಲ್ಲಿ ಗಂಡು ಮಗುವಿಗೆ ಹೋಗುತ್ತೇ ಎನ್ನುವ ಕಾರಣಕ್ಕೆ ಅತ್ತೆ ಸರೋಜ ಕೊಲೆ ಮಾಡಿದ್ದಾಳೆ ಎಂದು ಸೊಸೆ ನಾಗರತ್ನ ಆರೋಪಿಸಿದ್ದಾಳೆ. ಅಂದು ಗಡಿಬಿಡಿಯಾಗಿ ಮಗುವಿನ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಆರೋಗ್ಯವಾಗಿದ್ದ ಮಗು ದಿಢೀರ್ ಸಾವು ಯಾಕೇ ಆಯ್ತು ಎಂದು ತಾಯಿ ನಾಗರತ್ನ ಅವರಿಗೆ ಅತ್ತೆಯ ಮೇಲೆ ಅನುಮಾನ ಬಂದ ಬಳಿಕ ನವೆಂಬರ್ 23ರಂದು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ನಾಗರತ್ನ ಅತ್ತೆ ಸರೋಜಾಳ ವಿರುದ್ಧ ದೂರು ದಾಖಲು ಮಾಡಿದ್ದರು.
ದೂರು ದಾಖಲು ಆಗುತ್ತಿದ್ದಂತೆ ಅಲರ್ಟ್ ಆದ ಗಜೇಂದ್ರಗಡ ಪೊಲೀಸರು, ಗದಗ ಎಸಿ ವೆಂಕಟೇಶ ನಾಯಕ, ಸಿಪಿಐ ಎಸ್ ಎಸ್ ಬಿಳಗಿ, ಪಿಎಸ್ಐ ಸೋಮನಗೌಡ ನೇತೃತ್ವದಲ್ಲಿ, ಹೊತ್ತಿದ್ದ ನವಜಾತ ಶಿಶುವಿನ ಶವವನ್ನು ಹೊರಗಡೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಇನ್ನೂ ಒಂಬತ್ತು ತಿಂಗಳ ಅದ್ವಿಕ್ ಎನ್ನುವ ಹೆತ್ತ ಮಗುವನ್ನು ಕಳೆದುಕೊಂಡು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಸಾಲ ಸೂಲ ಮಾಡಿ ಮದುವೆ ಮಾಡಿದ್ವಿ. ಆದ್ರೆ, ಸರೋಜ ನಮ್ಮ ಮಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಾರೆ. ಇವಾಗ ಮುದ್ದಾದ ಮೊಮ್ಮಗನನ್ನು ಕೊಲೆ ಮಾಡಿದ್ದಾರೆ ಎಂದು ಕಣ್ಣೀರು ನಾಗರತ್ನ ಅವರ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಪೊಲೀಸ್ ತನಿಖೆಯಿಂದಲೇ ಮಗುವಿನ ಸಾವಿನ ರಹಸ್ಯ ಗೋತ್ತಾಗಲಿದೆ.
Discover more from Coastal Times Kannada
Subscribe to get the latest posts sent to your email.
Discussion about this post