ಮಂಗಳೂರು, ಫೆ 27: ಈ ಬಾರಿ ರಾಜ್ಯದಲ್ಲಿ ಬರಗಾಲ ಹೆಚ್ಚಾಗಿದ್ದು, ನೀರಿಲ್ಲದೇ, ಸುಡು ಬಿಸಿಲಿನಲ್ಲಿ ಜನ ತತ್ತರಿಸುತ್ತಿದ್ದಾರೆ. ಈ ಬಾರಿಯ ಹವಾಮಾನ ವೈಪರೀತ್ಯದಿಂದ ಭೂಮಿಯಲ್ಲಿ ನೀರಿನ ಬರ ಮಾತ್ರವಲ್ಲದೆ, ಅಗಾಧವಾದ ಸಮುದ್ರದಲ್ಲಿ ಮತ್ಸ್ಯ ಕೂಡ ಬರ ಎದುರಾಗಿದೆ. ಈ ವೇಳೆ ಮೀನುಗಾರಿಕೆಗೆ ತೆರಳ ಬೇಕಿದ್ದ ನೂರಾರು ಬೋಟುಗಳು ಈಗಲೇ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕುತ್ತಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳುತ್ತಿರುವ ಕಡಲ ಮಕ್ಕಳು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಫೆಬ್ರವರಿ ಹಾಗೂ ಮಾರ್ಚ್ ಸಮೃದ್ಧವಾಗಿ ಮೀನುಗಳು ದೊರೆಯುವ ಕಾಲ. ಮೀನುಗಾರರೂ ಒಂದಷ್ಟು ಜೇಬು ತುಂಬಿಸುವ ಕಾಲ. ಆದರೆ ಈ ಬಾರಿ ಕಡಲಾಳದಲ್ಲಿ ಮತ್ಸ್ಯಕ್ಷಾಮ ಹೆಚ್ಚಾಗಿದೆ. ಹೀಗಾಗಿ ಮೀನುಗಾರರು ನಿರೀಕ್ಷಿಸಿದ ಲಾಭ ಇರಲಿ, ಖುರ್ಚುಗಳನ್ನು ಸಮದೂಗಿಸಲು ಪರದಾಡುವಂತಾಗಿದೆ.
ಹಿಂದೆಲ್ಲ ಆಳ ಸಮುದ್ರ ಮೀನುಗಾರಿಕೆಗೆ ಕನಿಷ್ಠ ನಾಲ್ಕು ತಿಂಗಳು ರಜೆ ಇರುತ್ತಿತ್ತು. ಮೀನುಗಳು ಸಂತಾನಾಭಿವೃದ್ಧಿ ನಡೆಸುವ ಮಳೆಗಾಲದಲ್ಲಂತೂ ಮೀನುಗಾರಿಕೆ ಸುತಾರಾಂ ನಡೆಯುತ್ತಿರಲಿಲ್ಲ. ಈ ಸಂಪ್ರದಾಯ ಈಗ ಉಲ್ಲಂಘನೆಯಾಗಿದೆ. ರಜಾ ಅವಧಿ ಎರಡು ತಿಂಗಳಿಗೆ ಮೊಟಕುಗೊಂಡಿದೆ. ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಭೀಕರ ಪೆಟ್ಟು ನೀಡುತ್ತಿದೆ. ಮೀನುಗಳ ಸಂತಾನಾಭಿವೃದ್ಧಿಗೆ ಪೆಟ್ಟು ಬಿದ್ದಿದ್ದು, ಮತ್ಸ್ಯಕ್ಷಾಮಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ತಜ್ಞರು. ಹವಾಮಾನ ವೈಪರೀತ್ಯವೂ ಗಾಯದ ಮೇಲೆ ಬರೆ ಎಳೆದಿದೆ. ಸಮುದ್ರ ಮೀನುಗಾರಿಕೆಗೆ ಗಡಿ ಭೇದವಿಲ್ಲ. ತಮಿಳುನಾಡಿನ ಮೀನುಗಾರರು ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೆ ಇಲ್ಲಿನ ಬೋಟುಗಳು ಮೀನುಗಾರಿಕೆಗೆ ತಮಿಳುನಾಡು ಕಡೆಗೆ ಹೋದಲ್ಲಿ ಅವರ ಮೇಲೆ ಹಲ್ಲೆಗಳಾಗುತ್ತಿದೆ. ಬೋಟುಗಳಿಗೆ, ಮೀನುಗಾರಿಕಾ ಪರಿಕರಗಳಿಗೆ ಹಾನಿ ಮಾಡಲಾಗುತ್ತಿದೆ. ಪರಿಣಾಮ ಕಷ್ಟ – ನಷ್ಟಗಳನ್ನು ಎದುರಿಸಲಾಗದೆ.
ಕಳೆದೆರಡು ತಿಂಗಳಿಂದ ಸಮುದ್ರಕ್ಕೆ ತೆರಳದೆ ದಕ್ಕೆಯಲ್ಲಿ ಬೋಟ್‌ಗಳು ಲಂಗರು ಹಾಕುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ವಹಿಸಲು ದೇಶದಲ್ಲಿ ಮೀನುಗಾರಿಕೆಗೆ ಒಂದೇ ರೀತಿಯ ಕಾನೂನು ಜಾರಿಗೆ ತರಬೇಕು. ನಿಷೇಧಿತ ಮೀನುಗಾರಿಕೆ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಮೀನುಗಾರರು ಒತ್ತಾಯ ಮಾಡುತ್ತಿದ್ದಾರೆ. ಈ ಬಾರಿಯ ಮತ್ಸ್ಯಕ್ಷಾಮದಿಂದ ಮೀನುಗಾರಿಕೆಯನ್ನೇ ನಂಬಿಕೊಂಡ ಕುಟುಂಬಗಳಿಗೆ ದೊಡ್ಡ ಹೊಡೆತ ಬಿದ್ದಿದ್ದು, ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಮೀನುಗಾರರು ಸರ್ಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 3 ಸಾವಿರ ಕೋಟಿ ಯೋಜನೆ ಘೋಷಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post